ಕಾಂಗ್ರೆಸ್‍ನಲ್ಲಿ ಪವರ್ ಸೆಂಟರ್‌ಗಳು ಹೆಚ್ಚಾಗುತ್ತಿವೆ- ರೇಣುಕಾಚಾರ್ಯ ಲೇವಡಿ

Public TV
2 Min Read

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಪವರ್ ಸೆಂಟರ್‌ಗಳು ಹೆಚ್ಚುತ್ತಿವೆ ಎಂದು ಹೇಳುವ ಮೂಲಕ ಶಾಸಕ ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ನಲ್ಲಿ ಪವರ್ ಸೆಂಟರ್ ಗಳು ಹೆಚ್ಚಾಗುತ್ತಿವೆ. ಡಿಕೆಶಿ ಪವರ್ ಸೆಂಟರ್, ಸಿದ್ದರಾಮಯ್ಯ ಪವರ್ ಸೆಂಟರ್ ಹೀಗೆ ಅನೇಕ ಪವರ್ ಸೆಂಟರ್ ಗಳಿವೆ. ಹೀಗಾಗಿ ಸಿದ್ದರಾಮಯ್ಯನವರಿಗೆ ವಿಪಕ್ಷ ನಾಯಕ ಸ್ಥಾನ ಹೋಗಬಹುದು ಎಂಬ ಭಯ ಶುರುವಾಗಿದೆ. ಈ ಕಾರಣಕ್ಕಾಗಿ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಸಿಎಂ ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳಸಿದವರು. ಈ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ವರಿಷ್ಠರೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಭ್ರಮಾಲೋಕದಿಂದ ಹೊರಗೆ ಬರಬೇಕಿದೆ. ಅವರು ಮತ್ತೆ ಸಿಎಂ ಆಗುತ್ತೇನೆ ಎಂಬ ಭ್ರಮೆಯಲ್ಲಿ ತೇಲುತ್ತಿದ್ದಾರೆ. ಯಡಿಯೂರಪ್ಪನವರನ್ನು ಟೀಕೆ ಮಾಡಿದರೆ ನಾನು ಸಿಎಂ ಆಗಬಹುದು ಎಂಬ ಭ್ರಮೆಯಿಂದ ಹೊರಗೆ ಬನ್ನಿ ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.

ಯಡಿಯೂರಪ್ಪನವರು ಕೇವಲ ವೀರಶೈವ ಸಮುದಾಯಕ್ಕೆ ಸೇರಿದವರಲ್ಲ. ಎಲ್ಲ ಸಮಾಜಕ್ಕೂ ಸೇರಿದ ಪ್ರಶ್ನಾತೀತ ನಾಯಕ. ಕೆಲ ವೀರಶೈವ ಮುಖಂಡರು ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಇವರಿಗೆ ಅಧಿಕಾರ ನೀಡಿದವರು ಯಾರು, ಬಸನಗೌಡ ಪಾಟೀಲ್ ಯತ್ನಾಳ್ ಹುಚ್ಚರಂತೆ ಮಾತನಾಡುತ್ತಿದ್ದಾರೆ. ಸಚಿವ ಸ್ಥಾನ ಸಿಗದೆ ಹತಾಶರಾಗಿ ಈ ರೀತಿ ಹುಚ್ಚು ಹುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೆ. ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರೆಲ್ಲರೂ ಒತ್ತಾಯ ಮಾಡುತ್ತೇವೆ ಎಂದರು.

ಈ ಬಾರಿ ಸಚಿವ ಸಂಪುಟದಲ್ಲಿ ನನಗೆ ಅವಕಾಶ ನೀಡುತ್ತಾರೆ ಎನ್ನುವ ಭರವಸೆ ಇದೆ. ಹಾದಿ ಬೀದಿಯಲ್ಲಿ ನಾನು ಸಚಿವ ಸ್ಥಾನದ ಬಗ್ಗೆ ಮಾತನಾಡುವುದಿಲ್ಲ, ಕೇಳುವುದಿಲ್ಲ. ಆದರೆ ಈ ಬಗ್ಗೆ ಪಕ್ಷದ ಮುಖಂಡರ ಜತೆ ಚರ್ಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಿಜಯೇಂದ್ರ ಅವರು ಬಸವಕಲ್ಯಾಣದಿಂದ ಸ್ಪರ್ಧಿಸುವ ಕುರಿತು ಕಾರ್ಯಕರ್ತರು, ಮುಖಂಡರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ ವಿಜಯೇಂದ್ರ ಸ್ಪರ್ಧೆ ಮಾಡುವ ಬಗ್ಗೆ ಎಲ್ಲೂ ಹೇಳಿಲ್ಲ. ಯುವ ನಾಯಕರಾಗಿ ವಿಜಯೇಂದ್ರ ಬೆಳೆಯುತ್ತಿದ್ದಾರೆ. ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡಬಹುದು. ಸ್ಪರ್ಧೆ ಮಾಡಿದರೆ ಗೆಲುವು ಖಚಿತ. ಆದರೆ ಅವರು ಸ್ಪರ್ಧೆ ಮಾಡಲಿ ಎಂದು ಹೇಳುವ ಅಧಿಕಾರ ನನಗಿಲ್ಲ. ಬಸವಕಲ್ಯಾಣದಿಂದ ಸ್ಪರ್ಧಿಸಿದರೆ ಖಂಡಿತ ಗೆಲ್ಲುತ್ತಾರೆ. ಆದರೆ ವಿಜಯೇಂದ್ರ ಹಾಗೂ ಮುಖ್ಯಮಂತ್ರಿಗಳಿಗೆ ಆ ಬಗ್ಗೆ ಮನಸ್ಸಿಲ್ಲ ಎಂದರು.

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಪಾತ್ರ ಇದೆ. ಹೀಗಾಗಿಯೇ ಸಿಬಿಐ ತನಿಖೆ ನಡೆಸುತ್ತಿದೆ. ಇದರಲ್ಲಿ ಬಿಜೆಪಿ ಪಾತ್ರ ಇಲ್ಲ. ಸಿಬಿಐ ದುರುಪಯೋಗ ಪಡಿಸಿಕೊಂಡಿರುವುದು ಕಾಂಗ್ರೆಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *