ಕಾಂಗ್ರೆಸ್‍ಗೆ ಇಂದು ವಿಶ್ವಾಸಮತದ ಅಗ್ನಿ ಪರೀಕ್ಷೆ – ಗೆಲ್ಲುವ ವಿಶ್ವಾಸದಲ್ಲಿ ಗೆಹ್ಲೋಟ್ ಕೈ ಪಡೆ

Public TV
1 Min Read

– ಕೊನೆ ಕ್ಷಣದಲ್ಲಿ ಚೆಕ್ ಮೆಟ್ ಕೊಡ್ತಾರಾ ಸಚಿನ್ ಪೈಲಟ್?

ನವದೆಹಲಿ: ರಾಜಸ್ಥಾನ ಕಾಂಗ್ರೆಸ್ಸಿನಲ್ಲಿ ಎದ್ದಿದ್ದ ಬಂಡಾಯದ ಬಿರುಗಾಳಿ ಶಮನವಾಗಿದೆ. ಮಾಜಿ ಡಿಸಿಎಂ ಸಚಿನ್ ಪೈಲಟ್ ವಾಪಸ್ ಪಕ್ಷಕ್ಕೆ ಮರಳಿದ್ದಾರೆ. ಇಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಿದೆ. ಕೈ ಪಡೆ ವಿಶ್ವಾಸದಲ್ಲಿದ್ದರೂ ಸಚಿನ್ ಪೈಲಟ್ ಕೊನೆ ಕ್ಷಣದಲ್ಲಿ ಕೈಕೊಡುವ ಆಂತಕದಲ್ಲಿದೆ.

ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಲ್ಲಿ ಎದ್ದಿದ್ದ ಬಂಡಾಯದ ಬಿರುಗಾಳಿ ತಣ್ಣಗಾಗಿದೆ. ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಪಣತೊಟ್ಟಿದ್ದ ಸಚಿನ್ ಪೈಲಟ್ ಮತ್ತು ಬೆಂಬಲಿಗ ಶಾಸಕರು ಕಾಂಗ್ರೆಸ್ ಗೆ ಮರಳಿದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡಿದ್ದೇವೆ ಅಂತ ಸಚಿನ್ ಪೈಲಟ್ ಹೇಳಿದ್ದಾರೆ.

ಈ ಮಧ್ಯೆ ಇಂದಿನಿಂದ ರಾಜಸ್ಥಾನ ವಿಧಾನಸಭೆ ಕಲಾಪವೂ ಪ್ರಾರಂಭವಾಗಲಿದ್ದು, ಸದನ ಪ್ರಾರಂಭವಾಗುತ್ತಿದ್ದಂತೆ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಲಿದೆ. ಇದಕ್ಕಾಗಿ ಸಿಎಂ ಅಶೋಕ್ ಗೆಹ್ಲೋಟ್ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು ನಗುತ್ತಾ ಪರಸ್ಪರ ಮಾತನಾಡಿದ್ದಾರೆ.

ಗುರುವಾರ ರಾಜಸ್ಥಾನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಈ ನಿರ್ಧಾರ ಮಾಡಿದ್ದಾರೆ. ವಿಶ್ವಾಸಮತ ಗೆಲ್ಲುವ ವಿಶ್ವಾಸವಿದ್ದರೂ ಕಾಂಗ್ರೆಸ್ ನಾಯಕರಿಗೆ ಪೈಲಟ್ ಮೇಲೆ ಅನುಮಾನ ಹೋಗಿಲ್ಲ. ಹಾಗಾಗಿ ಇಂದು ನಡೆಯುವ ವಿಶ್ವಾಸ ಮತ ಮಂಡನೆ ಕುತೂಹಲ ಮೂಡಿಸಿದ್ದು, ಕೊನೆ ಕ್ಷಣದವರೆಗೂ ಮಹತ್ವದ ತಿರುವು ಪಡೆಯಬಹುದು. ಪೈಲಟ್ ಕಾಂಗ್ರೆಸ್ ಚೆಕ್ ಮೇಟ್ ಇಡಬಹುದು ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *