ಕಾಂಗ್ರೆಸ್‌ ಸಭೆಯಲ್ಲಿ ಪತ್ರ ಬಂಡಾಯ – ನಾಯಕರ ವಿರುದ್ಧ ರಾಹುಲ್‌ ಆಕ್ರೋಶ

Public TV
2 Min Read

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬ ಮೂಲ ವಿಷಯವನ್ನುಇಟ್ಟುಕೊಂಡು ನಡೆಯುತ್ತಿರುವ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪತ್ರ ಬಂಡಾಯದ ಬಗ್ಗೆ ಈಗ ಭಾರೀ ಚರ್ಚೆ ಆಗುತ್ತಿದೆ.

ಝೂಮ್‌ ಅಪ್ಲಿಕೇಶನ್‌ ಮೂಲಕ ನಡೆಯುತ್ತಿದ್ದು ಹಿರಿಯ ನಾಯಕರು ಭಾಗವಹಿಸಿದ್ದಾರೆ. ಸಭೆಯ ಆರಂಭದಲ್ಲೇ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ “ಹೊಸ ಅಧ್ಯಕ್ಷರನ್ನು ಹುಡುಕಿ. ನಾನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಿಲ್ಲ” ಎಂದು ಹೇಳಿದ್ದಾರೆ.

ಈ ವೇಳೆ ನಿಮ್ಮ ನಿರ್ಧಾರವನ್ನು ಮತ್ತೊಮ್ಮೆ ಮರುಪರಿಶೀಲಿಸಿ. ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಮನಮೋಹನ್ ಸಿಂಗ್ ಮನವಿ ಮಾಡಿಕೊಂಡರು. ಆದರೆ ಸೋನಿಯಾ ಗಾಂಧಿ ಅನಾರೋಗ್ಯದ ಕಾರಣ ನೀಡಿ ನಾನು ಮುಂದುವರಿಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ಈ ವೇಳೆ 20 ಪ್ರಮುಖರ ನಾಯಕರು ಪತ್ರ ಬರೆದ ವಿಚಾರಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್‌ 19, ಮಧ್ಯಪ್ರದೇಶ, ರಾಜಸ್ಥಾನ ಬಿಕ್ಕಟ್ಟಿನ ಸಮಯದಲ್ಲಿ ಹಿರಿಯ ನಾಯಕರಾದವರು ಈ ರೀತಿ ಪತ್ರ ಬರೆಯುವುದು ಸರಿಯಲ್ಲ ಎಂದು ರಾಹುಲ್‌ ಆಕ್ಷೇಪ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗಾಂಧಿಯೇತರ ವ್ಯಕ್ತಿಗಳು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಲೇಬೇಕು – ಪ್ರಿಯಾಂಕಾ ಗಾಂಧಿ

ಸೋನಿಯಗಾಂಧಿ ಗೆ ಆರೋಗ್ಯ ಸಮಸ್ಯೆ ಇದೆ. ಅವರು ಆಸ್ಪತ್ರೆ ದಾಖಲಾದ ವೇಳೆ ಪತ್ರ ಬರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.

20 ಪ್ರಮುಖ ನಾಯಕರು ಕಾಂಗ್ರೆಸ್ಸಿಗೆ ಪೂರ್ಣಾವಧಿ ನಾಯಕತ್ವ ಬೇಕು. ಅಧ್ಯಕ್ಷರಾದವರು ಸಕ್ರೀಯವಾಗಿ ಕೆಲಸ ಮಾಡಬೇಕು. ಸಾಮೂಹಿಕ ನಾಯಕತ್ವದೊಂದಿಗೆ ಕೆಲಸ ಮಾಡಬೇಕು. ಪಕ್ಷದ ಒಳಗಡೆ ಚುನಾವಣೆ ನಡೆಸಬೇಕು ಇತ್ಯಾದಿ ವಿಚಾರಗಳನ್ನು ಪ್ರಸ್ತಾಪಿಸಿ ಪತ್ರ ಬರೆದಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋತಿದ್ದಕ್ಕೆ ನೈತಿಕ ಹೊಣೆಯನ್ನು ಹೊತ್ತು ರಾಹುಲ್‌ ಗಾಂಧಿ ಮೇ 25 ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕಳೆದ ವರ್ಷ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್‌ ಗಾಂಧಿ, ಕೆಲ ನಾಯಕರಿಗೆ ಪಕ್ಷಕ್ಕಿಂತ ಮಕ್ಕಳ ಮೇಲಿನ ಆಸಕ್ತಿಯೇ ಹೆಚ್ಚಾದ ಪರಿಣಾಮ ನಮಗೆ ಸೋಲಾಗಿದೆ. ಸರಿಯಾಗಿ ಕೆಲಸ ಮಾಡದ್ದಕ್ಕೆ ಗೆಲ್ಲಬಹುದಾಗಿದ್ದ ಹಿರಿಯ ನಾಯಕರು ಸೋತಿದ್ದಾರೆ ಎಂದು ಟೀಕಿಸಿದ್ದರು.

ಸದ್ಯ ಕಾಂಗ್ರೆಸ್‌ ನಾಯಕರ ಮಧ್ಯೆ ಅಧ್ಯಕ್ಷರು ಯಾರಾಗಬೇಕು ಎಂಬುದರ ಬಗ್ಗೆ ಗೊಂದಲವಿದೆ. ಪಂಜಾಬ್‌ ಸಿಎಂ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌, ತಿರುವನಂತಪುರದದ ಸಂಸದ ಶಶಿ ತರೂರ್‌ ಪ್ರಿಯಾಂಕಾ ಪರ ಒಲವು ವ್ಯಕ್ತಪಡಿಸಿದ್ದಾರೆ.

ಮನೀಶ್‌ ತಿವಾರಿ ಸೇರಿದಂತೆ ಕೆಲ ನಾಯಕರು ಪಕ್ಷದ ಒಳಗಡೆ ಒಂದು ಚುನಾವಣೆ ನಡೆಸಿ ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋನಿಯಾ ಗಾಂಧಿ ಅವರು ನಾನು ಪೂರ್ಣಾವಧಿಗೆ ಅಧ್ಯಕ್ಷೆ ಸ್ಥಾನದಲ್ಲಿ ಇರುವುದಿಲ್ಲ. ಮುಂದಿನ ಅಧ್ಯಕ್ಷರ ನೇಮಕದವರೆಗೆ ಹಂಗಾಮಿಯಾಗಿ ಮುಂದುವರಿಯುತ್ತೇನೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *