ಕಾಂಗ್ರೆಸ್‌ ಕುತಂತ್ರ, ದೇವೇಗೌಡರ ಭಾವನಾತ್ಮಕ ಮಾತಿಗೆ ಟ್ರ್ಯಾಪ್‌ ಆಗಿ ಕೆಟ್ಟೆ – ಎಚ್‌ಡಿ ಕುಮಾರಸ್ವಾಮಿ

Public TV
2 Min Read

ಮೈಸೂರು: ಕಾಂಗ್ರೆಸ್‌ನವರ ಕುತಂತ್ರ ಮತ್ತು ಎಚ್‌ಡಿ ದೇವೇಗೌಡರ ಭಾವನಾತ್ಮಕ ಮಾತಿಗೆ ಟ್ರ್ಯಾಪ್‌ಗೆ ನಾನು ಹೆಸರು ಕಳೆದುಕೊಂಡೆ. ಇದರಿಂದಾಗಿ ನಮ್ಮ ಶಕ್ತಿ ಕುಂದಿತು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು 2006ರಲ್ಲಿ ಹಿಂದೆ ಸಿಎಂ ಆಗಿದ್ದಾಗ ಉತ್ತಮ ಹೆಸರು ಮಾಡಿದ್ದೆ. ನನಗೆ ಬಂದಿದ್ದ ಉತ್ತಮ ಹೆಸರನ್ನು ಸಿದ್ದರಾಮಯ್ಯ ಅಂಡ್ ಟೀಂ ಹಾಳು ಮಾಡಿತು. ಪ್ರೀಪ್ಲ್ಯಾನ್ ಮಾಡಿ ನನ್ನ ಹೆಸರನ್ನು ಹಾಳು ಮಾಡಿದರು. ಕಾಂಗ್ರೆಸ್‍ನಿಂದಲೇ ಎಲ್ಲವೂ ಸರ್ವನಾಶವಾಯಿತು. ಸಿದ್ದರಾಮಯ್ಯ ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿಗೆ 105 ಸ್ಥಾನ ಬರಲು ಸಿದ್ದರಾಮಯ್ಯ ಕಾರಣ -ಎಚ್‌ಡಿಕೆ

ಈ ವೇಳೆ ನಮ್ಮ ನಮ್ಮ ಕುಟುಂಬಕ್ಕೆ ಒಂದು ಶಾಪ ಇದೆ. ನಾವು ಯಾರನ್ನು ಬೆಳೆಸುತ್ತೇವೆ ಅವರೇ ನಮ್ಮ ಬಗ್ಗೆ ಮಾತನಾಡುತ್ತಾರೆ. ಈ ಶಾಪ ವಿಮೋಚನೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಂಶೋಧನೆ ಮಾಡಬೇಕಾಗಿದೆ ಎಂದು ಹೇಳಿ ಸಿದ್ದರಾಮಯ್ಯನವರಿಗೆ ಮತ್ತೆ ಟಾಂಗ್‌ ನೀಡಿದರು.

ನಾನು ಸರಿಯಾದ ಸಮಯಕ್ಕೆ ಕಾಯುತ್ತಿದ್ದೇನೆ. ಸಕ್ರಿಯ ಸಂಘಟನೆಗೆ ಇಳಿದು ಪಕ್ಷವನ್ನು ಬಲ ಪಡಿಸುತ್ತೇನೆ. ಸಂಕ್ರಾಂತಿಯ ಬಳಿಕ ಜೆಡಿಎಸ್‌ ಪಕ್ಷವನ್ನು ಪುನಶ್ಚೇತನ ಮಾಡಲಾಗುವುದು ಎಂದು ಈ ವೇಳೆ ತಿಳಿಸಿದರು.

ನಾನು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ. ಇದು ಬಿಜೆಪಿ ಸರ್ಕಾರ ಅಲ್ಲ. ಇಲ್ಲಿ ಇರುವುದು ರಾಜ್ಯದ ಸರ್ಕಾರ. ಯಾವುದೇ ಪಕ್ಷದ ಸರಕಾರ ಅಧಿಕಾರಕ್ಕೂ ಬಂದರೂ ರಾಜ್ಯದ ಸರಕಾರ ಆಗುತ್ತದೆ. ಈ ಸರ್ಕಾರ ಪ್ರಾಧಿಕಾರಗಳನ್ನು ಆರಂಭಿಸಿ ದುಂದುವೆಚ್ಚ ಹೆಚ್ಚಾಗಿದೆ. ಒಬ್ಬೊಬ್ಬ ಅಧ್ಯಕ್ಷರಿಗೆ 3 – 4 ಕೋಟಿ ರೂ ವೆಚ್ಚವಾಗುತ್ತದೆ ಎಂದು ದೂರಿದರು.

ಅರ್ಧ ರಾತ್ರಿಯಲ್ಲಿ ಐಶ್ಚರ್ಯ ಬಂದರೆ ಹೇಗೇ ಆಡುತ್ತಾರೋ ಹಾಗೇ ಕೆಲ ಸಚಿವರು ಹಾಗೇ ಆಡುತ್ತಿದ್ದಾರೆ. ಕೆಲವರಿಗೆ ಸಚಿವ ಸ್ಥಾನದ ಘನತೆಯೆ ಗೊತ್ತಿಲ್ಲ. ಸಚಿವರು ಜನರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

ನೆರೆಯಿಂದ ತತ್ತರಿಸಿದ ಜನರ ನೆರವಿಗೆ ಸಚಿವರು ಧಾವಿಸಲಿಲ್ಲ. ಯಾರು ಯಾವ ಇಲಾಖೆಯ ಮಂತ್ರಿ ಎಂಬುದೇ ಗೊತ್ತಿಲ್ಲ. ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಕ್ಕೆ ಸಚಿವರು ಹೋಗುತ್ತಿದ್ದಾರೆ. ಈಗಲಾದರೂ ಗ್ರಾಮಗಳ ಜನರ ಕಷ್ಟ ಆಲಿಸಲಿ. ಸರಕಾರ ಸಲಹೆ ಮತ್ತು ಟೀಕೆ ಯಾವುದನ್ನು ಲೆಕ್ಕಕ್ಕೆ ತೆಗೆದು ಕೊಳ್ಳುತ್ತಿಲ್ಲ. ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಎಂಬ ಮಾತಿನಂತೆ ಸರ್ಕಾರವಿದೆ ಎಂದು ದೂರಿದರು.

Share This Article
Leave a Comment

Leave a Reply

Your email address will not be published. Required fields are marked *