ಕಾಂಗ್ರೆಸ್ಸಿನ ದೌಲತ್ತೆ ಅದರ ದುಸ್ಥಿತಿಗೆ ಕಾರಣ- ಮತ್ತೆ ಬಿಜೆಪಿ ಗೆಳೆತನ ಬಯಸ್ತಿದ್ದಾರಾ ಹೆಚ್‍ಡಿಕೆ?

Public TV
3 Min Read

– ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯರಿಗೆ ಇಮೇಜ್ ಇತ್ತೆ?
– ಬಿಜೆಪಿ ಜೊತೆ ಹೋಗಿದ್ರೆ ನನ್ನ ಸರ್ಕಾರ ಇರ್ತಿತ್ತು!

ಬೆಂಗಳೂರು: ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಡಿದಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಮತ್ತೊಮ್ಮೆ ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರೋ ಕುಮಾರಸ್ವಾಮಿ ಅವರು ಮತ್ತೆ ಬಿಜೆಪಿ ಗೆಳೆತನ ಬಯಸ್ತಿದ್ದಾರಾ ಪ್ರಶ್ನೆಯೊಂದು ರಾಜ್ಯ ರಾಜಕೀಯ ಅಂಗಳದಲ್ಲಿ ಉದ್ಭವಿಸಿದೆ.

ಸಿದ್ದರಾಮಯ್ಯ ಹೇಳಿಕೆ ದುರಹಂಕಾರದ್ದು: ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ವೇಳೆ ಜೆಡಿಎಸ್ ನ ಜಾತ್ಯತೀತತೆ ಬಹಿರಂಗವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ & ಸಿದ್ದರಾಮಯ್ಯರ ದೃಷ್ಟಿಯಲ್ಲಿ ಜಾತ್ಯತೀತತೆ ಅಂದರೆ ಏನು? ಇದನ್ನು ಈ ವೇಳೆಯಲ್ಲಿ ತಿಳಿಯ ಬಯಸುತ್ತೇನೆ. ಕಾಂಗ್ರೆಸ್ಸಿನ ಅಪವ್ಯಾಖ್ಯಾನದಿಂದಲೇ ಇಂದು ಜಾತ್ಯತೀತೆಯನ್ನು ಅನುಮಾನಿಸಲಾಗುತ್ತಿದೆ ಸಭಾಪತಿ ಅವಿಶ್ವಾಸ ನಿರ್ಣಯದ ವೇಳೆ ಬೆಂಬಲ ನೀಡುವಂತೆ ಕಾಂಗ್ರೆಸ್ನ ಯಾವ ನಾಯಕನೂ ಸೌಜನ್ಯಕ್ಕೂ ಜೆಡಿಎಸ್ ಬಳಿ ಚರ್ಚಿಸಿಲ್ಲ. ಹೀಗಿದ್ದೂ, ಜೆಡಿಎಸ್ ನ ಜಾತ್ಯತೀತತೆಯ ಪರೀಕ್ಷೆ ನಡೆಯುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆ ದುರಹಂಕಾರದ್ದು. ಬೆಂಬಲ ಕೇಳದಿದ್ದರೂ ಬೆಂಬಲಿಸಲು ನಾವೇನು ಗುಲಾಮರಲ್ಲ. ಕಾಂಗ್ರೆಸ್ಸಿನ ದೌಲತ್ತೇ ಅದರ ದುಸ್ಥಿತಿಗೆ ಕಾರಣ. ಇದನ್ನೂ ಓದಿ: ಹೆಚ್‍ಡಿಕೆ ‘ಕಮಲ’ ಪ್ರೀತಿ ಯಾಕೆ?

“ನಮ್ಮ ಧರ್ಮ, ದೇವರಲ್ಲಿ ಆಳ ನಂಬಿಕೆ ಹೊಂದಿಯೂ, ಎಲ್ಲರ ನಂಬಿಕೆಗಳನ್ನು ಗೌರವಿಸುವುದು, ಎಲ್ಲರನ್ನೂ ಸಮಾನವಾಗಿ ಕಾಣುವುದು” ದೇವೇಗೌಡರ ಜಾತ್ಯತೀತೆ ಎಂಬುದನ್ನು ಸಂದರ್ಭ ಸಿಕ್ಕಾಗ ಹೇಳಿದ್ದೇನೆ. ಆದರೆ ಕಾಂಗ್ರೆಸ್, ಸಿದ್ದರಾಮಯ್ಯರ ವ್ಯಾಖ್ಯಾನ ಇದಕ್ಕೆ ವಿರುದ್ಧವಾದ್ದು. ಜಾತಿಗಳನ್ನು ಒಡೆಯುವುದು, ಅನಗತ್ಯ ಓಲೈಕೆಯೇ ಅವರ ಜಾತ್ಯತೀತತೆ.

ಸಿದ್ದರಾಮಯ್ಯನವರಿಗೆ ಇಮೇಜ್ ಇತ್ತೇ?: ಒಳ್ಳೆ ಇಮೇಜ್ ಅನ್ನು ಚುನಾವಣೆ ಮತ್ತು ಸ್ಥಾನಗಳಿಕೆ ಮೇಲೆ ಲೆಕ್ಕ ಹಾಕಿದ್ದಾರೆ ಸಿದ್ದರಾಮಯ್ಯನವರು. ಹಾಗಾದರೆ ದೇಶದ ಎಲ್ಲ ಕಡೆ ಸೋಲುತ್ತಿರುವ ಕಾಂಗ್ರೆಸ್ ಇಮೇಜ್ ಕತೆ ಏನು? 2018ರ ಚುನಾವಣೆಯಲ್ಲಿ 120 ರಿಂದ 80ಕ್ಕೆ ಕುಸಿದ, ಸ್ವತಃ ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯನವರಿಗೆ ಇಮೇಜ್ ಇತ್ತೇ? ಇಮೇಜ್ ಇರುವುದು ನಮ್ಮ ಒಳ್ಳೆತನದಲ್ಲಿ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಹೆಚ್‍ಡಿಕೆಗೆ ಗುಡ್‍ವಿಲ್ ಇದ್ರೆ ತಾನೇ ಹಾಳಾಗೋದು?: ಸಿದ್ದರಾಮಯ್ಯ

ಜೆಡಿಎಸ್ ಬಿಜೆಪಿಯ ‘ಬಿ’ ಟೀಮ್ ಎಂಬ ಕಾಂಗ್ರೆಸ್ಸಿಗರ ಸವಕಲು ಆರೋಪಕ್ಕೆ ಈ ಹಿಂದೆಯೇ ಉತ್ತರ ನೀಡಿದ್ದೇನೆ. ಈಗಲೂ ಹೇಳುತ್ತೇನೆ. ಕಾಂಗ್ರೆಸ್ಸೇ ಜೆಡಿಎಸ್ ಮ ಬಿ ಟೀಂ.ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಪಕ್ಕದಲ್ಲಿ ಆವರಣ ಹಾಕಿ ಅದರಲ್ಲಿ ಜೆಡಿಎಸ್ ಎಂದು ಬರೆದಾಗಷ್ಟೇ ಅದರ ಹೆಸರು ಪೂರ್ಣವಾಗುತ್ತದೆ. ಅಷ್ಟರ ಮಟ್ಟಿಗೆ ಅಲ್ಲಿ ಜೆಡಿಎಸ್ ಇದೆ. ಇದನ್ನೂ ಓದಿ: ಬಿಜೆಪಿ ಜೊತೆ ಸೇರಿದ್ರೆ 5 ವರ್ಷ ನಾನೇ ಸಿಎಂ ಆಗುತ್ತಿದ್ದೆ: ಕುಮಾರಸ್ವಾಮಿ

ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್ ಎಂದು ಹೇಳಿದ್ದಾರೆ ಸಿದ್ದರಾಮಯ್ಯ. ಅಂದರೆ ಹೈಕಮಾಂಡ್ ನಿರ್ಣಯ ತಮಗೆ ಇಷ್ಟವಿರಲಿಲ್ಲ ಎಂಬುವುದು ಸಿದ್ದರಾಮಯ್ಯ ಅವರ ಮಾತಿನಲ್ಲಿ ಧ್ವನಿಸುತ್ತಿರುವ ಅರ್ಥ. ಹೀಗಾಗಿಯೇ ಸಿದ್ದರಾಮಯ್ಯ ಸರ್ಕಾರ ಕೆಡವಿದರು. ಅದರ ಅಪವಾದ ಬೇರೆಯವರಿಗೆ ಬಳಿದರು. ಇದನ್ನೂ ಓದಿ: ಕುಮಾರಸ್ವಾಮಿ ಬಿಜೆಪಿ ಜೊತೆ ಬಂದಿದ್ರೆ ಸಿಎಂ ಆಗ್ತಿರಲಿಲ್ಲ: ಅಶ್ವಥ್ ನಾರಾಯಣ್

ನನ್ನ ಸರ್ಕಾರ ಇನ್ನೂ ಇರುತ್ತಿತ್ತು: ಬಿಜೆಪಿ ರಾಷ್ಟ್ರೀಯ ನಾಯಕರೇ ಮೈತ್ರಿಗೆ ಆಹ್ವಾನ ನೀಡಿದ್ದರು. ಬಿಜೆಪಿ ಜೊತೆ ಹೋಗಿದ್ದರೆ ರೈತರ ಪರವಾದ ನನ್ನ ಸರ್ಕಾರ ಇನ್ನೂ ಇರುತ್ತಿತ್ತು. ದೇವೇಗೌಡರಂತಹ ನಾಯಕರು ಸೋಲುವ ಸ್ಥಿತಿಯೂ ಬರುತ್ತಿರಲಿಲ್ಲ. ಬಿಜೆಪಿ ಮಿತ್ರ ಪಕ್ಷಗಳನ್ನು ಸೌಜನ್ಯಯುತವಾಗಿ ನಡೆಸಿಕೊಂಡ ನಿದರ್ಶನವಿದೆ. ಕಾಂಗ್ರೆಸ್ಸಿಗೆ ಅದು ಗೊತ್ತಿಲ್ಲ. ಜಾತ್ಯತೀತ ನಿಲುವಿನ ಬಗ್ಗೆ! ದೇವೇಗೌಡರ ಬದ್ಧತೆ ಬಗ್ಗೆ ನಾವು ನಿಮ್ಮಿಂದ ಉಪದೇಶ ಕೇಳಬೇಕಿಲ್ಲ. ದೇವೇಗೌಡರ ಬದ್ಧತೆಯನ್ನು ಬಳಸಿಕೊಂಡು ಬ್ಲ್ಯಾಕ್‍ಮೇಲ್ ಮಾಡಿದ ಕಾಂಗ್ರೆಸ್ ಇವತ್ತು ಜೆಡಿಎಸ್ ನ ನಿಲುವನ್ನು ಪ್ರಶ್ನಿಸುವ ಯಾವ ನೈತಿಕತೆ ಉಳಿಸಿಕೊಂಡಿದೆ

ಇನ್ನು ಫೈವ್ ಸ್ಟಾರ್ ಸಂಸ್ಕೃತಿ ಬಗ್ಗೆ ರಾಗ ಎಳೆದಿದ್ದಿರಿ? ಫೈವ್ ಸ್ಟಾರ್ ಹಾಗೂ ಗುಡಿಸಲಿನಿಂದಲೂ ಅಧಿಕಾರ ನಡೆಸಿದ್ದೇನೆ. ಜನತೆಗೆ ನನ್ನಷ್ಟು ಸುಲಭವಾಗಿ ದಕ್ಕುವ ರಾಜಕಾರಣಿ ಮತ್ತೊಬ್ಬರಿಲ್ಲ ಎಂಬುವುದನ್ನು ನೆನಪಿಸಲು ಬಯಸುತ್ತೇನೆ. ನಿಮ್ಮ ತಾಳಕ್ಕೆ ಕುಣಿಯಲು ಜೆಡಿಎಸ್ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ ರಾಜ್ಯದ ಇಂದಿನ ರಾಜಕಾರಣದ ಅಯೋಮಯ ಸ್ಥಿತಿಗೆ ನಿಮ್ಮ ದ್ವಂದ್ವ ಹಾಗೂ ಇಬ್ಬಂದಿತನದ ನಿಲುವೇ ಕಾರಣ ಎಂದು ಕಾಂಗ್ರೆಸ್ ವಿರುದ್ಧ ದೂರುಗಳ ಬಾಣ ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *