ಕಸ ಎಸೆಯುವವರಿಗೆ ಬೈಗುಳದ ಶಿಕ್ಷೆ- ಆತ್ರಾಡಿ ಗ್ರಾಮಸ್ಥರಿಂದ ಅವಾಚ್ಯ ಬೈಗುಳ

Public TV
1 Min Read

ಉಡುಪಿ: ರಸ್ತೆ ಬದಿ ಕಸ ಹಾಕುವವರ ವಿರುದ್ಧ ಉಡುಪಿಯ ಆತ್ರಾಡಿ ಗ್ರಾಮಸ್ಥರು ಫುಲ್ ರಾಂಗ್ ಆಗಿದ್ದಾರೆ. ಕಸ ಹಾಕಬೇಡಿ ಅಂತ ಐದಾರು ವರ್ಷದಿಂದ ಬೋರ್ಡ್ ಹಾಕಿ ಮನವಿ ಮಾಡಿದರೂ ಜನ ಅದನ್ನು ಪಾಲಿಸುತ್ತಿರಲಿಲ್ಲ. ಇದೀಗ ಬೈಗುಳದ ಬ್ಯಾನರ್ ಹಾಕಿ ಕಸ ಹಾಕೋದನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ.

ಹಿರಿಯಡ್ಕ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬೈಗುಳದ ಬರಹದ ಫ್ಲೆಕ್ಸ್ ಅಳವಡಿಸುವ ಮೂಲಕ ರಸ್ತೆ ಬದಿ ಕಸ ಹಾಕುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಭಾಗದಲ್ಲಿ ಕಸ ಹಾಕುವವರು ಅನೈತಿಕ ಸಂಬಂದಕ್ಕೆ ಹುಟ್ಟಿದವರು ಎಂಬ ಬೈಗುಳದ ಬ್ಯಾನರ್ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದಯವಿಟ್ಟು ಇಲ್ಲಿ ಕಸ ಹಾಕಬೇಡಿ ಎಂಬ ಕೋರಿಕೆಯ ಬ್ಯಾನರ್ ಅಳವಡಿಸಲಾಗಿತ್ತು. ಜನ ಅದನ್ನು ಕ್ಯಾರ್ ಮಾಡದಿದ್ದಾಗ ಈ ದಾರಿಯನ್ನು ಸ್ಥಳೀಯರು ಹಿಡಿದಿದ್ದಾರೆ.

ಹೆದ್ದಾರಿಯ ಬದಿಯಲ್ಲಿ ದಿನನಿತ್ಯ ಕಸವನ್ನು ಎಸೆದು ಹೋಗುತ್ತಿದ್ದರು. ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಇದೀಗ ಬೈಗುಳದ ಬ್ಯಾನರ್ ಅಳವಡಿಸಿದ್ದಾರೆ. ಬೈಗುಳದ ಉಸಾಬರಿಯೇ ಬೇಡವೆಂದು ಮುಂದಿನ ದಿನಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಬಹುದು. ಅಥವಾ ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬಂತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಬಹುದು.

ಈ ಬಗ್ಗೆ ಸ್ಥಳೀಯ ನಿವಾಸಿ ದಿವಾಕರ್ ಮಾತನಾಡಿ ವಾಹನದಲ್ಲಿ ಓಡಾಡುವವರು ತಮ್ಮ ಮನೆಯ ಕಸವನ್ನು ತಂದು ರಸ್ತೆಬದಿಯಲ್ಲಿ ಎಸೆದು ಹೋಗುತ್ತಾರೆ. ಇಡೀ ಊರನ್ನು ಗಲೀಜು ಮಾಡುವ ದುಷ್ಟರಿಗೆ ಮರ್ಯಾದೆ ಇದ್ದರೆ ಇನ್ನು ಕಸ ಹಾಕಲಿಕ್ಕಿಲ್ಲ. ಇದೇ ತರ ಬೇರೆಬೇರೆ ಸ್ಥಳ ಇದೆ. ಗ್ರಾಮ ಪಂಚಾಯತ್, ನಗರಸಭೆ ಕಸ ನಿರ್ವಹಣೆಗೆ ಹಲವಾರು ಯೋಜನೆಗಳನ್ನು ಮಾಡಿದರೂ ಜನರು ಸಹಕಾರ ನೀಡದಿದ್ದರೆ ಯೋಜನೆ ಸಾಕಾರಗೊಳ್ಳಲು ಸಾಧ್ಯ ಇಲ್ಲ ಎಂದರು.

 

Share This Article
Leave a Comment

Leave a Reply

Your email address will not be published. Required fields are marked *