ಕಳ್ಳರಿಂದ 40 ಲಕ್ಷ ಮೌಲ್ಯದ ಐಷಾರಾಮಿ ಬೈಕ್‍ಗಳನ್ನು ವಶಪಡಿಸಿಕೊಂಡ ಪೊಲೀಸರು

Public TV
1 Min Read

ಬೆಂಗಳೂರು: ಮನೆಯ ಮುಂದೆ, ಕಚೇರಿ, ರಸ್ತೆ ಬದಿ ನಿಲ್ಲಿಸಿದ್ದ ಐಷಾರಾಮಿ ಬೈಕ್ ಗಳನ್ನು ಗಮನಿಸಿ, ಕ್ಷಣಾರ್ಧದಲ್ಲಿ ತಮ್ಮ ಚಾಣಾಕ್ಷತನದಿಂದ ಯಾರಿಗೂ ಅನುಮಾನ ಬಾರದಂತೆ ಕದ್ದು ಮಾರಾಟ ಮಾಡುತ್ತಿದ್ದ ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ನೆಲಮಂಗಲ ಉಪ ವಿಭಾಗದ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ಉಪ ವಿಭಾಗದ ಮಾದನಾಯಕನಹಳ್ಳಿ ಪೊಲೀಸರು, ಐವರನ್ನು ಬಂಧಿಸಿ ಬರೊಬ್ಬರಿ 46 ಐಷಾರಾಮಿ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬುಲೆಟ್, ಡ್ಯೂಕ್, ಪಲ್ಸರ್, ಆಕ್ಟಿವಾ, ಡಿಯೋ, ಟಿವಿಎಸ್ ಸೇರಿದಂತೆ ವಿವಿಧ ಕಂಪನಿಯ ಬೈಕ್ ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ನೀಡುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದು, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ನೇತೃತ್ವದಲ್ಲಿ ವಾರಸುದಾರಿಗೆ ಬೈಕ್‍ಗಳನ್ನು ಹಿಂದಿರುಗಿಸಲಾಯಿತು.

ಈ ಬೈಕ್‍ಗಳನ್ನು ಕದ್ದ ಆರೋಪಿಗಳಾದ ರವಿಕುಮಾರ್, ಮುನಿರಾಜು, ಜಗದೀಶ್, ಮೋಹನ್ ಕುಮಾರ್, ಶಿವಶಂಕರ್ ಎಂಬವರನ್ನು ಬಂಧಿಸಲಾಗಿದೆ. ಇವರೆಲ್ಲಾ 20 ವರ್ಷ ವಯಸ್ಸಿನ ಆಸುಪಾಸಿನ ಯುವಕರು. ಈ ವಯಸ್ಸಿನಲ್ಲಿ ಶೀಘ್ರ ಹಣ ಮಾಡುವ ನಿಟ್ಟಿನಲ್ಲಿ ಕಳ್ಳತನ ದಾರಿ ಹಿಡಿದಿದ್ದು, ಪ್ರೈವೇಟ್ ಡಿಟೆಕ್ಟಿವ್ ಸೇರಿದಂತೆ ತರಕಾರಿ ವ್ಯಾಪಾರ, ಇನ್ನಿತರ ಕೆಲಸ ಮಾಡಿಕೊಂಡು ನಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‍ಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಮಾನವೀಯತೆಗೆ ಸಾಕ್ಷಿ – ಕಳೆದುಕೊಂಡಿದ್ದ 50 ಸಾವಿರ ಮರಳಿ ಪಡೆದ ಮಹಿಳೆ

ಬೆಂಗಳೂರು ಗ್ರಾಮಾಂತರ ಎಸ್‍ಪಿ ಡಾ.ಕೋನವಂಶಿ ಕೃಷ್ಣ ನೇತೃತ್ವದಲ್ಲಿ ನೆಲಮಂಗಲ ಉಪ ವಿಭಾಗದ ಡಿವೈಎಸ್‍ಪಿ ಜಗದೀಶ್ ಮಾದನಾಯಕನಹಳ್ಳಿ ಸಿಪಿಐ ಮಂಜುನಾಥ್ ನೇತೃತ್ವದ ತಂಡ ಮಿಂಚಿನ ಕಾರ್ಯಚರಣೆ ನಡೆಸಿ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿ ದುಬಾರಿ ಬೆಲೆಯ ಬೈಕ್ ಗಳನ್ನ ವಶಪಡಿಸಿಕೊಂಡಿದ್ದಾರೆ. ಪಿಎಸ್‍ಐ ದಾಳೇಗೌಡ ಹಾಗೂ ಸಿಬ್ಬಂದಿಗೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಅಭಿನಂದಿಸಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ಡಾ.ಕೋನವಂಶಿ ಕೃಷ್ಣ, ಎಎಸ್‍ಪಿ ಲಕ್ಷ್ಮಿ ಗಣೇಶ್, ನೆಲಮಂಗಲ ಉಪ ವಿಭಾಗದ ಡಿವೈಎಸ್‍ಪಿ ಜಗದೀಶ್, ಸಿಪಿಐ ಮಂಜುನಾಥ್, ಕುಮಾರ್, ಅರುಣ್ ಸಾಲಂಕಿ, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *