ರಾಯಚೂರು: ಜಿಲ್ಲೆಯಲ್ಲಿ ನಕಲಿ ಕಂಪನಿ, ಬ್ರ್ಯಾಂಡ್‍ಗಳ ಹೆಸರಿನಲ್ಲಿ ಕಳಪೆ ಹತ್ತಿ ಬೀಜ ಮಾರಾಟ ಮಾಡುತ್ತಿದ್ದ ಖದೀಮರನ್ನು ಸಿಂಧನೂರಿನ ತುರ್ವಿಹಾಳ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೊಪ್ಪಳದ ಕನಕಗಿರಿ ಮೂಲದ ರಾಮರಾವ್, ರಾಮಾಂಜಿನೇಯಾ, ರಂಗಾರೆಡ್ಡಿ ಬಂಧಿತ ಆರೋಪಿಗಳು.
ಪರವಾನಿಗಿ ಇಲ್ಲದ ಕಂಪನಿ ಹೆಸರಿನಲ್ಲಿ ನಕಲಿ ಬೀಜ ಮಾರಾಟ ಮಾಡುತ್ತಿದ್ದರು. ನ್ಯೂ ರಘು 39, ಡಬಲ್ ಗಾರ್ಡ್ 2, ಬಿಲ್ಲಾ ಹೆಸರಿನ ನಕಲಿ ಕಂಪನಿಯ ಬೀಜ ಮಾರಾಟ ನಡೆಸಿದ್ದರು. ನಕಲಿ ಬೀಜ ಮಾರಾಟ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ.
ಕಾರ್ಯಾಚರಣೆ ವೇಳೆ ಬೀಜದ ಪ್ಯಾಕೆಟ್ ಸಾಗಣೆಗೆ ಬಳಸುತ್ತಿದ್ದ ಕ್ರೂಸರ್ ವಾಹನ ಹಾಗೂ ಒಂದು ಗೂಡ್ಸ್ ಗಾಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬಂಧಿತರಿಂದ 10,33,600 ರೂ. ಮೌಲ್ಯದ 2,584 ನಕಲಿ ಬೀಜದ ಚೀಲ ಹಾಗೂ 19,500 ರೂ. ನಗದು ಜಪ್ತಿ ಮಾಡಲಾಗಿದೆ. ಘಟನೆ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.