ಕಳಪೆ ಪಿಪಿಇ ಕಿಟ್ ಸರಬರಾಜು ಆಗಿದ್ದರೆ ಕ್ರಮ: ಸಚಿವ ಡಾ.ಸುಧಾಕರ್

Public TV
2 Min Read

– ರಾಯಚೂರಿನಲ್ಲಿ 8 ಜನ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸಚಿವ ಗರಂ
– ಓಪೆಕ್ ಕೋವಿಡ್-19 ಆಸ್ಪತ್ರೆಯಲ್ಲಿನ ಸುರಕ್ಷತೆ ಬಗ್ಗೆ ವರದಿ ನೀಡಲು ಸೂಚನೆ

ರಾಯಚೂರು: ಕಳಪೆ ಗುಣಮಟ್ಟದ ಪಿಪಿಇ ಕಿಟ್ ಸರಬರಾಜು ಆಗಿಲ್ಲ. ಯಾವುದಾದರೂ ಸಂಸ್ಥೆಯಲ್ಲಿ ಕಳಪೆ ಮಟ್ಟದ ಕಿಟ್ ಇದ್ದರೆ, ಸಂಸ್ಥೆಯ ನಿರ್ದೇಶಕರ ಮೇಲೆ ಕ್ರಮ ವಹಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಕಿಟ್ ಗಳು ಇರಲು ಸಾಧ್ಯವಿಲ್ಲ. ಪ್ರಾರಂಭದಲ್ಲಿ ಸಬ್ ಸ್ಟ್ಯಾಂಡರ್ಡ್ ಕಿಟ್ ಗಳು ಬಂದಿದ್ದವು. ಕೇಂದ್ರ ಸರ್ಕಾರ ಮೊದಲು ಕಳುಹಿಸಿದ್ದ ಕಿಟ್‍ಗಳು ಸಬ್ ಸ್ಟ್ಯಾಂಡರ್ಡ್ ಆಗಿದ್ದವು. ಅವುಗಳನ್ನು ಕೇಂದ್ರ ವಾಪಸ್ ತರಿಸಿಕೊಂಡಿತು. ರಾಜ್ಯ ಸರ್ಕಾರ ಅಂತರರಾಷ್ಟ್ರೀಯ ಗುಣಮಟ್ಟದ 2 ಲಕ್ಷ ಕಿಟ್ ತರಿಸಿದೆ. ಕೇಂದ್ರ ಸರ್ಕಾರ ನಮ್ಮಲ್ಲಿ 15 ಸಂಸ್ಥೆಗೆ ಕಿಟ್ ತಯಾರಿಸಲು ಅನಮತಿ ಕೊಟ್ಟಿದೆ. ಅವರೂ ಕೂಡ ಗುಣಮಟ್ಟದ ಕಿಟ್ ಗಳನ್ನು ತಯಾರಿಸುತ್ತಿದ್ದಾರೆ. ಕಳಪೆ ಗುಣಮಟ್ಟದ ಪಿಪಿಇ ಕಿಟ್ ಬಂದಿರಲು ಸಾಧ್ಯವಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಕಳಪೆ ಮಟ್ಟದ ಕಿಟ್ ಗಳು ಬಂದಿದ್ದರೆ ತುಂಬಾ ಜನಕ್ಕೆ ಪಾಸಿಟಿವ್ ಬರುತ್ತಿತ್ತು. ಮಂತ್ರಿಯಾಗಿ ಹೇಳುತ್ತಿದ್ದೇನೆ ಯಾವುದೇ ಸಂಸ್ಥೆಗೂ ಕಳಪೆ ಗುಣಮಟ್ಟದ ಕಿಟ್ ಸರಬರಾಜು ಆಗಿಲ್ಲ. ಇದುವರೆಗೂ ಸರಬರಾಜು ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ವಿಕ್ಟೋರಿಯಾದಲ್ಲಿ ಕಿಟ್ ಸಬ್ ಸ್ಟ್ಯಾಂಡರ್ಡ್ ಆಗಿದ್ದರೆ ಬಹಳ ಜನಕ್ಕೆ ಪಾಸಿಟಿವ್ ಆಗಬೇಕಿತ್ತು. ವಿಕ್ಟೋರಿಯಾ ಫಸ್ಟ್ ಕೋವಿಡ್ ಡೆಸಿಗ್ನೆಟೆಡ್ ಆಸ್ಪತ್ರೆ. ನಾನು ಆಸ್ಪತ್ರೆಯ ಬಗ್ಗೆ ಗಮನಹರಿಸಿದ್ದೇನೆ. ಕಿಟ್ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಕ್ರಮಕೈಗೊಳ್ಳುತ್ತೇನೆ ಎಂದರು.

ರಾಯಚೂರಿನಲ್ಲಿ 8 ಜನ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಸಚಿವ ಡಾ.ಸುಧಾಕರ್ ಗಂಭೀರವಾಗಿ ಎಚ್ಚರಿಕೆ ನೀಡಿದರು. ಕೋವಿಡ್-19 ಆಸ್ಪತ್ರೆ ಸಿಬ್ಬಂದಿಗೆ ಪಾಸಿಟಿವ್ ಬಂದಿರುವುದು ಆತಂಕ ಹೆಚ್ಚಿಸುತ್ತೆ. ಸಿಬ್ಬಂದಿಗೆ ಯಾಕೆ ಸುರಕ್ಷತೆ ಇಲ್ಲ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಬೇಕು. ಆಸ್ಪತ್ರೆಯಲ್ಲಿ ಸರಿಯಾದ ಸುರಕ್ಷತಾ ಕ್ರಮ ಕೈಗೊಂಡಿಲ್ಲವೇ, ಈ ಕುರಿತು ಮೂರು ದಿನಗಳಲ್ಲಿ ಮಾಹಿತಿ ಬೇಕು. ರಾಜ್ಯದ ಯಾವ ಜಿಲ್ಲೆಯಲ್ಲೂ ಇಷ್ಟು ವೈದ್ಯಕೀಯ ಸಿಬ್ಬಂದಿಗೆ ಪಾಸಿಟಿವ್ ಬಂದಿಲ್ಲ. ಈ ಕುರಿತು ವರದಿ ನೀಡುವಂತೆ ರಿಮ್ಸ್ ನಿರ್ದೇಶಕ ಡಾ.ಬಸವರಾಜ್ ಪೀರಾಪುರೆಗೆ ಸೂಚಿಸಿದರು.

ಪಂಜಾಬ್ ನಲ್ಲಿ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೊರೊನಾ ಜಾಗೃತಿ ಮೂಡಿಸುವ ಸಲುವಾಗಿ ನಾವು ಹಿಂದೆ ಲಾಕ್‍ಡೌನ್ ಮಾಡಿದ್ದೇವೆ. ಆರೋಗ್ಯ ಕ್ಷೇತ್ರದ ಸಿದ್ಧತೆಗಾಗಿ ಲಾಕ್‍ಡೌನ್ ಮಾಡಲಾಯಿತು. ಈಗ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಲಾಕ್‍ಡೌನ್ ಮತ್ತೆ ಮುಂದುವರಿಸಿದರೆ ಜೀವ ಉಳಿಸುವುದು ಒಂದೇ ಆಗುತ್ತೆ. ಜೀವನದ ಕಡೆ ಲಕ್ಷ್ಯ ಕೊಡದಿದ್ದರೆ ಬಹಳ ಅನ್ಯಾಯವಾಗುತ್ತೆ. ಹೀಗಾಗಿ ಎರಡು ಕಡೆ ಪರಿಗಣಿಸಿ ಜೀವ, ಜೀವನ ಉಳಿಸುತ್ತಿದ್ದೇವೆ ಎಂದು ಸಚಿವ ಸುಧಾಕರ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *