ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ ವಸಂತ ಕುಷ್ಟಗಿ ಇನ್ನಿಲ್ಲ

Public TV
2 Min Read

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ ಲೋಕದ ಅಚ್ಚಳಿಯದ ನಕ್ಷತ್ರವೊಂದು ಕಳಚಿ ಬಿದ್ದಿದೆ. ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿಯವರಿಂದು ಕೊನೆಯುಸಿರೆಳೆದಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕುಷ್ಟಗಿ ಅವರನ್ನು ಇತ್ತೀಚೆಗಷ್ಟೆ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು “ಹಾರೈಕೆ ಕವಿ” ಪ್ರೊ. ವಸಂತ ಕುಷ್ಟಗಿ ಅವರು ಅಸ್ತಂಗತರಾಗಿದ್ದಾರೆ.

ಸಾಹಿತಿಗಳಾಗಿ, ಸಾಹಿತ್ಯ ಸಂಘಟಕರಾಗಿ ಕಲಬುರಗಿಯ ಸಾಹಿತ್ಯ ಪ್ರಿಯರಿಗೆ ಸಾಹಿತ್ಯಿಕ, ಶೈಕ್ಷಣಿಕ ವಿಷಯಗಳನ್ನು ತಮ್ಮ ಚಟುವಟಿಕೆಗಳ ಮುಖಾಂತರ ಪರಿಚಯಿಸುತ್ತಿದ್ದರು. ವಸಂತ ಕುಷ್ಟಗಿಯವರು 1936ರ ಅಕ್ಟೋಬರ್ 10 ರಂದು ಬಾಗಲಕೋಟೆ ಜಿಲ್ಲೆಯಲ್ಲಿ ಜನಿಸಿದರು. ಯಾದಗಿರಿಯಲ್ಲಿ ಪ್ರಾರಂಭಿಕ ಶಿಕ್ಷಣ ಮುಗಿಸಿ, ಹೈದ್ರಾಬಾದ್‍ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಗಿಸಿದ್ದಾರೆ. ಅಲ್ಲದೆ ಹಲವಾರು ನಾಟಕಗಳನ್ನು ಬರೆಯುವುದರ ಜೊತೆಗೆ ರಂಗನಟರಾಗಿಯೂ ಪಾಲ್ಗೊಳ್ಳುತ್ತಿದ್ದರು. ಹೀಗೆ ಸಾಹಿತ್ಯದ ವಾತಾವರಣದಲ್ಲೇ ಬೆಳೆದ ವಸಂತ ಕುಷ್ಟಗಿಯವರು ‘ನನ್ನ ಮನೆ ಹಾಲಕೆನೆ’ ಎಂಬ ಕವಿತೆಯನ್ನು ಐದನೇ ತರಗತಿಯಲ್ಲಿದ್ದಾಗಲೇ ಬರೆದಿದ್ದರು.

ವಸಂತ ಕುಷ್ಟಗಿ ಅವರ ಮೊದಲ ಕವನ ಸಂಕಲನ ‘ಭಾವದೀಪ್ತಿ’ 1970ರಲ್ಲಿ ಪ್ರಕಟವಾಗಿತ್ತು. ನಂತರ ಹೊಸಹೆಜ್ಜೆ, ಗಾಂಧಾರಿಯ ಕರುಣೆ, ದಿಬ್ಬಣದ ಹಾಡು, ಬೆತ್ತಲೆಯ ಬಾನು, ಹಾರಯಿಕೆ ಮುಂತಾದ 9 ಕವನ ಸಂಕಲನಗಳನ್ನು ಬರೆದರು. ಜೊತೆಗೆ ಗದ್ಯ ಸಾಹಿತ್ಯದಲ್ಲಿಯೂ ಹಲವಾರು ಕೃತಿಗಳನ್ನ ಬರೆದಿದ್ದಾರೆ. ತಮ್ಮದೇ ಬತೇರೇಶ ಪ್ರಕಾಶನದಡಿಯಲ್ಲಿ ತಮ್ಮದಲ್ಲದೆ, ಇತರ ಸಾಹಿತಿಗಳ ಕೃತಿಗಳೂ ಸೇರಿ ಸುಮಾರು 25 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇದನ್ನು ಓದಿ:ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ-ಬಿ.ಸಿ ಪಾಟೀಲ್

ಕರ್ನಾಟಕ ಸಾಹಿತ್ಯ ಅಕಾಡೆಮಿ, ಇತಿಹಾಸ ಅಕಾಡೆಮಿ, ಹೈದರಾಬಾದಿನ ಶಿಕ್ಷಣ ಸಂಸ್ಥೆ, ಕರ್ನಾಟಕ ವಿ.ವಿ.ದ ಸೆನೆಟ್, ಗುಲಬರ್ಗಾ ವಿ.ವಿ.ದ ಸೆನೆಟ್, ಕೋಲ್ಕತ್ತಾದ ಏಷಿಯಾಟಿಕ್ ಸೊಸೈಟಿ ಆಫ್ ಇಂಡಿಯಾ ಮುಂತಾದ ಹಲವಾರು ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ಕುಷ್ಟಗಿಯವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ವಾರಂಬಳ್ಳಿ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ – ಆನಾಮಿಕ ದತ್ತಿ ಪ್ರಶಸ್ತಿ, ಭಾರತ ರತ್ನ ಸರ್. ಎಂ.ವಿ. ಪ್ರತಿಷ್ಠಾನ ಪ್ರಶಸ್ತಿ, ಉಡುಪಿ ಜಿಲ್ಲೆಯ ಬೇಲಾಡಿ ಮಾರಣ್ಣ ಮಾಡ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳಲ್ಲದೆ ಬಾದಾಮಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಮೇದಕ್ಕಿಯಲ್ಲಿ ನಡೆದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷತೆ, ಕಲಬುರ್ಗಿ ಜಿಲ್ಲಾ 9ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿ.ವಿ.ದ ಗೌರವ ಡಾಕ್ಟರೇಟ್ ಮುಂತಾದ ಗೌರವಗಳು ಕುಷ್ಟಗಿ ಅವರಿಗೆ ದೊರೆತಿವೆ.

Share This Article
Leave a Comment

Leave a Reply

Your email address will not be published. Required fields are marked *