ಕಲಬುರಗಿ: ಹಿರೇಮಠ ದಕ್ಷಿಣ ಕಾಳಗಿ ಮಠದ ಶ್ರೀ ಶಿವಬಸವಚಾರ್ಯ ಸ್ವಾಮೀಜಿ (51) ಇಂದು ಬೆಳಗ್ಗೆ ಲಿಂಗೈಕರಾಗಿದ್ದಾರೆ.
ಬೆಳಗ್ಗೆ 9 ಗಂಟೆಗೆ ಮಠದಲ್ಲಿರುವಾಗಲೇ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡಿತ್ತು, ಕೂಡಲೇ ಮಠದಲ್ಲಿನ ಭಕ್ತರು ಶ್ರೀಗಳನ್ನು ಪಕ್ಕದಲ್ಲಿರುವ ಕಾಳಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ತೀವ್ರ ಹೃದಯಾಘಾತದಿಂದ ಶ್ರೀಗಳು ಲಿಂಗೈಕ್ಯರಾಗಿದ್ದಾರೆ.
ಶ್ರೀಗಳ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕಾಳಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಶ್ರೀಗಳ ದರ್ಶನ ಪಡೆಯಲು ಮಠದತ್ತ ಆಗಮಿಸುತ್ತಿದ್ದಾರೆ. ಶ್ರೀಗಳ ನಿಧನಕ್ಕೆ ಶಾಸಕ ಡಾ.ಅವಿನಾಶ್ ಜಾಧವ್, ಸಂಸದ ಡಾ.ಉಮೇಶ್ ಜಾಧವ್ ಸಂತಾಪ ಸೂಚಿಸಿದ್ದಾರೆ. ಇಂದು ಸಂಜೆ ಮಠದಲ್ಲಿ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲು ಮಠದ ಭಕ್ತರು ನಿರ್ಧರಿಸಿದ್ದಾರೆ.