ಕಲಬುರಗಿಯಲ್ಲಿ ಬದುಕನ್ನೇ ಮುಳುಗಿಸಿದ ಮಹಾಮಳೆ – ಮನೆ ಮಠ ಕಳೆದುಕೊಂಡು ಗ್ರಾಮಸ್ಥರು ಕಣ್ಣೀರು

Public TV
2 Min Read

ಕಲಬುರಗಿ: ಭೀಮೆ, ಕೃಷ್ಣಾರ್ಭಟಕ್ಕೆ ಉತ್ತರ ಕರ್ನಾಟಕದ ಮಂದಿ ಬೆಚ್ಚಿಬಿದ್ದಿದ್ದಾರೆ. ಊರಿಗೆ ಊರೇ ಮುಳುಗಡೆಯಾಗಿ, ಜನಜೀವನ ಅಯೋಮಯವಾಗಿದೆ. ಮನೆ, ಮಠ ಕಳೆದುಕೊಂಡ ಜನ ಕಣ್ಣೀರ ಹೊಳೆಯನ್ನೇ ಹರಿಸ್ತಿದ್ದಾರೆ. ಕಲಬುರಗಿಯಲ್ಲಂತೂ ಜಲರಾಕ್ಷಸ ಘನಘೋರ ಪರಿಸ್ಥಿತಿ ನಿರ್ಮಾಣ ಮಾಡಿದ್ದಾನೆ.

ಹೌದು. ಉತ್ತರ ಕರ್ನಾಟಕದ ಸ್ಥಿತಿ ನಿಜಕ್ಕೂ ದುರಂತ ಅಂದ್ರೆ ತಪ್ಪಾಗಲ್ಲ. ಹಳ್ಳಿಗೆ ಹಳ್ಳಿಗಳನ್ನೇ ಮುಳುಗಿಸಿದೆ. ಮನೆಯೊಳಗೂ ನೀರು, ಹೊರಗೂ ನೀರು, ಅಕ್ಕಿ, ಗೋಧಿ, ಹೊಲ, ಗದ್ದೆ ಎಲ್ಲವೂ ನೀರುಪಾಲಾಗಿವೆ. ಕಲಬುರಗಿಯನ್ನಂತು ಮಹಾಮಳೆ ಮುಳುಗಿಸಿ ಬಿಟ್ಟಿದೆ. ರಣಭೀಕರ ನೆರೆ ಸುಮಾರು 140ಕ್ಕೂ ಹೆಚ್ಚು ಹಳ್ಳಿಗಳನ್ನು ಹಿಂಡಿ ಹಿಪ್ಪೆ ಮಾಡಿದೆ. ಇಂದು ಕೆಲ ಗ್ರಾಮಗಳಲ್ಲಿ ಪ್ರವಾಹ ಕಡಿಮೆಯಾಗಿದ್ದು, ಜನರು ತಮ್ಮ ತಮ್ಮ ಮನೆಗಳ ಪರಿಸ್ಥಿತಿಯನ್ನು ಕಂಡು ಕಣ್ಣೀರು ಹಾಕುತ್ತಿದ್ದಾರೆ. ಅಫ್ಜಲ್ ಪುರದ ತಾಲೂಕಿನಲ್ಲಿ ಬಂಕಲಿಗೆ ಗ್ರಾಮ ಸಂಪೂರ್ಣ ಸರ್ವನಾಶವಾಗಿದ್ದು, ಸುಮಾರು 200ಕ್ಕೂ ಹೆಚ್ಚಿನ ಮನೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ. ಮನೆಯಲ್ಲಿ ಇದ್ದ ಅಕ್ಕಿ, ಗೊಧಿ, ಪಾತ್ರೆ, ಟಿವಿ ಎಲ್ಲವೂ ಹಾಳಾಗಿವೆ. ಇದನ್ನ ನೋಡಿ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಇತ್ತ ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ 30 ಹೆಚ್ಚು ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ದವಸ ಧಾನ್ಯಗಳು ಹಾಳಾಗಿವೆ. ಮಕ್ಕಳು ಪುಸ್ತಕಗಳನ್ನು ಕಳೆದುಕೊಂಡು ಹೈರಾಣಾಗಿದ್ದಾರೆ. ಮಳೆ ನಿಂತು ಹೋದ ಮೇಲೆ ಈ ಗ್ರಾಮದ ಜನರ ಬದುಕು ಬೀದಿಗೆ ಬಿದ್ದಿದೆ. ಮಹಾಮಳೆಯಿಂದ ದವಸ, ಧಾನ್ಯಗಳನ್ನು, ಕುರಿಗಳನ್ನು ಸೇರಿದಂತೆ ಎಲ್ಲವನ್ನೂ ಕಳೆದದುಕೊಂಡು ಜನ ದಿಕ್ಕು ತೋಚದಂತಾಗಿದ್ದಾರೆ.

ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿದ್ದರಿಂದ ಫಿರೋಜಾಬಾದ್ ಗ್ರಾಮದ ಹಲವು ಮನೆಗಳು ಜಲಾವೃತವಾಗಿವೆ. ಗ್ರಾಮದ ಲಕ್ಷ್ಮಿ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಪ್ರವಾಹದ ನೀರಿನಲ್ಲೇ ಜನ ಈಜಾಡುತ್ತಿದ್ದು, ಗ್ರಾಮಸ್ಥರ ಸ್ಥಳಾಂತರ ಕಾರ್ಯ ನಡೀತಿದೆ. ಈ ವೇಳೆ ಅಜ್ಜಿಯೊಂದು ಮನೆ ಬಿಟ್ಟು ಎಲ್ಲೂ ಬರಲ್ಲ ಅಂತ ಹಠ ಮಾಡಿದ ಪ್ರಸಂಗವೂ ನಡೆದಿದೆ.

ಪ್ರವಾಹದಲ್ಲಿ ಈಜುತ್ತಲೇ ಬಂದ ಅರ್ಚಕ!
ಭೀಮಾ ನದಿಯ ಪ್ರವಾಹದಿಂದ ಗುಡಿಗಳು ಜಲಾವೃತಗೊಂಡಿವೆ. ಪ್ರವಾಹದ ಭಯದ ನಡುವೆಯೂ ಗ್ರಾಮಸ್ಥರು ಭಕ್ತಿಯನ್ನ ಬಿಟ್ಟಿಲ್ಲ. ಕಲಬುರಗಿಯ ಫಿರೋಜಾಬಾದ್‍ನಲ್ಲಿ ಗ್ರಾಮ ಪೂಜಾರಿ ಭೀಮಾ ನದಿಯಲ್ಲಿ ಈಜುತ್ತಾ ದೈನಂದಿನ ಪೂಜಾ ಕೈ0ಕಾರ್ಯ ನೆರವೇರಿಸಿದ್ದಾರೆ. ಗ್ರಾಮದ ಎಲ್ಲಾ ದೇವಾಲಯಗಳಿಗೂ ತೆರಳಿ ಅರ್ಚಕರು ಪೂಜೆ ಮಾಡಿದ್ದಾರೆ. ಒಟ್ಟಿನಲ್ಲಿ ಮಹಾಮಳೆಗೆ ಕಲಬುರಗಿ ಅಕ್ಷರಶಃ ತತ್ತರಿಸಿ ಹೋಗಿದೆ. ಮನೆ ಮಠ ಕಳೆದುಕೊಂಡ ಜನ ಕಣ್ಣೀರ ಹೊಳೆ ಹರಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *