ಕಲಬುರಗಿಯಲ್ಲಿ ನೂತನ ಮಾದರಿಯ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ: ನಿರಾಣಿ

Public TV
2 Min Read

– 2 ಎಕರೆ ಜಮೀನಿನಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣ
– ಯೋಜನೆಗೆ ಒಟ್ಟು 26.30 ಕೋಟಿ ವೆಚ್ಚ

ಬೆಂಗಳೂರು: ಕಲಬುರಗಿ ಜಿಲ್ಲೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿರುವ ಎಂಎಸ್‍ಕೆ ವಾಣಿಜ್ಯ ಬಡಾವಣೆಯಲ್ಲಿ ನೂತನ ಮಾದರಿಯ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿಯವರ ‘ವಿಶೇಷ ಆಸಕ್ತಿಯ’ ಪರಿಣಾಮವಾಗಿ ನಗರದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಸಚಿವ ನಿರಾಣಿ, ಕಲಬುರಗಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಗೊಳಿಸಿರುವ ಎಂಎಸ್‍ಕೆಎಲ್ ವಾಣಿಜ್ಯ ಬಡಾವಣೆಯಲ್ಲಿ ಕಾಯ್ದಿರಿಸಲಾದ ಅಂದಾಜು 2 ಎಕರೆ ವಿಸ್ತೀರ್ಣದ ನಾಗರಿಕ ಸೌಲಭ್ಯದ ನಿವೇಶನದಲ್ಲಿ ಸುವರ್ಣ ಕರ್ನಾಟಕ ವಾಣಿಜ್ಯ ಮಳಿಗೆಯನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ನವೆಂಬರ್ 27, 2012ರನ್ವಯ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಕೆಲವು ಕಾರಣಗಳಿಂದ ಯೋಜನೆಯನ್ನು ರದ್ದುಗೊಳಿಸಿ ನಾಗರಿಕ ಸೌಲಭ್ಯದ ನಿವೇಶನದಲ್ಲಿ ಹಲವು ವರ್ಷಗಳಿಂದ ತರಕಾರಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಈಗ ನೂತನ ಮಾದರಿಯ ತರಕಾರಿ ಮಾರುಕಟ್ಟೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ವತಿಯಿಂದ ನೀಡಲಾಗುವ ಅನುದಾನ ಮತ್ತು ಪ್ರಾಧಿಕಾರದ ವತಿಯಿಂದ 26.30 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ನೀಡಲು ಆಯುಕ್ತರು ಸಮ್ಮತಿಸಿದ್ದರು ಎಂದರು.

ಎಂಎಸ್‍ಕೆ ಮಿಲ್ (ವಾಣಿಜ್ಯ) ಬಡಾವಣೆಗೆ ಹೊಂದಿಕೊಂಡಿರುವ ಅಫ್ಜಲ್‍ಪುರಗೆ ಹೋಗುವ ರಸ್ತೆಯಲ್ಲಿ ಚಿಲ್ಲರೆ ವ್ಯಾಪಾರಸ್ಥರು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಪ್ರಸ್ತುತ ಕೊರೊನಾ ಹರಡುವಿಕೆ ತಡೆಗಟ್ಟಲು ಜಿಲ್ಲಾಡಳಿತ ಟೊಂಕ ಕಟ್ಟಿ ನಿಂತಿದೆ. ರಸ್ತೆ ಬದಿಯ ಚಿಲ್ಲರೆ ವ್ಯಾಪಾರಸ್ಥರನ್ನು ಪ್ರಾಧಿಕಾರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಗೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದರು.

ಈ ಬಡಾವಣೆ ತುಂಬಾ ದೂರವಿದ್ದು, ಸಾರ್ವಜನಿಕರಿಗೆ ಅನಾನೂಕೂಲವಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕಲಬುರಗಿ ಸುತ್ತಲಿನ ಹಳ್ಳಿಗಳಿಂದ ಬರುವ ರೈತರ ತರಕಾರಿಯನ್ನು ರಸ್ತೆಬದಿ ಮಾರಾಟ ಮಾಡುತ್ತಿರುವುದರಿಂದ ನೂತನವಾಗಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದರು. 60 ದ್ವಿಚಕ್ರ, 150 ನಾಲ್ಕು ಚಕ್ರ ವಾಹನಗಳ ನಿಲುಗಡೆ, ಲಿಫ್ಟ್, ಸ್ಟೇರ್ ಕೇಸ್, ಟ್ಯಾಂಕ್, ಎಲೆಕ್ಟ್ರಿಕಲ್, ಪೆನೆಲ್ ಕೋಣೆಯನ್ನು ಅಳವಡಿಸಲಾಗಿದೆ. ನೆಲಮಹಡಿಯಲ್ಲಿ ದೊಡ್ಡ, ಸಣ್ಣ ಅಂಗಡಿ, ಫ್ಲಾಟ್‍ಫಾರಂ, ಸಗಟು ವ್ಯಾಪಾರದ ಹರಾಜು ಪ್ರಕ್ರಿಯೆ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ, ಕೋಲ್ಟ್ ಸ್ಟೋರೆಜ್, ಬ್ಯಾಂಕ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *