ಕರ್ನಾಟಕದಲ್ಲಿ ಗಣೇಶ ಹಬ್ಬವನ್ನು ಆಚರಿಸಬೇಕಾದರೆ 10 ಮಾರ್ಗಸೂಚಿಗಳನ್ನು ಪಾಲಿಸಿ

Public TV
2 Min Read

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಗಲ್ಲಿಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಬಾರದು ಎಂದು ಕರ್ನಾಟಕ ಸರ್ಕಾರ ಹೇಳಿದೆ.

ಈ ಸಂಬಂಧ ಸರ್ಕಾರ ಇಂದು ಗಣೇಶ ಚತುರ್ಥಿಯನ್ನು ಹೇಗೆ ಸರಳವಾಗಿ ಆಚರಿಸಬೇಕು ಮತ್ತು ಗಣೇಶನ ಮೂರ್ತಿಯನ್ನು ಹೇಗೆ ವಿಸರ್ಜಿಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಮಾರ್ಗಸೂಚಿಯಲ್ಲಿ ಏನಿದೆ?
1. ಗಣೇಶ ಚತುರ್ಥಿಯನ್ನು ಸರಳವಾಗಿ, ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ ಇಲ್ಲವೆ ಮನೆಗಳಲ್ಲೇ ಆಚರಿಸುವುದು.

2. ಗಣೇಶೋತ್ಸವದಂದು ಸಾರ್ವಜನಿಕ ಸ್ಥಳ(ರಸ್ತೆ, ಗಲ್ಲಿ, ಓಣಿ, ಮೈದಾನ ಇತ್ಯಾದಿ)ಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು.

3. ಯಾವುದೇ ಕಾರಣಕ್ಕೂ ಸಾರ್ವಜನಿಕ ನದಿ, ಕೆರೆ, ಕೊಳ, ಬಾವಿ ಹಾಗೂ ಕಲ್ಯಾಣಿಗಳಲ್ಲಿ ಗಣೇಶಮೂರ್ತಿಯನ್ನು ವಿಸರ್ಜನೆ ಮಾಡುವಂತಿಲ್ಲ.

4. ಗಣೇಶ ಹಬ್ಬದಂದು ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲಿಯೂ ಮೆರವಣಿಗೆ ಮಾಡುವಂತಿಲ್ಲ. ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

5. ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಮನೆಗಳ ಆವರಣದಲ್ಲಿಯೇ ವಿಸರ್ಜಿಸಬೇಕು.

6. ಗಣೇಶ ಹಬ್ಬ ಆಚರಿಸುವ ದೇವಸ್ಥಾನಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಸೇಷನ್ ಮಾಡುವುದು, ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು. ಅಲ್ಲದೆ ಭಕ್ತರು ಕನಿಷ್ಠ 6 ಅಡಿ ಸಾಮಾಜಿಕ ಅಂತರ ಗುರುತಿಸುವುದು, ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

7. ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶಕರನ್ನು ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ದಳ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳಿಂದ ಹೊರಡಿಸಿದ ಸೂಚನೆ, ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸಬೇಕು.

8. ಗಣೇಶೋತ್ಸವ ಆಚರಣೆ ವೇಳೆ ಸಂದರ್ಭಕ್ಕನುಗುಣವಾಗಿ ಸರ್ಕಾರ, ಜಿಲ್ಲಾಡಳಿತ, ಪೊಲೀಸ್, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ, ಪ್ರಾಧಿಕಾರಗಳಿಂದ ಹೊರಡಿಸಲಾದ ಎಲ್ಲ ಆದೇಶ, ನಿರ್ದೇಶನ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

9. ಹಬ್ಬ ಹರಿದಿನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯ ಉಂಟಾಗಲು ಪೂಕವಾಗಿರುವುದರಿಂದ ಗಣೇಶ ಹಬ್ಬವನ್ನು ಅದೇ ರೀತಿ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರದಂತೆ ಕಾಪಾಡಬೇಕು.

10. ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಅಡಿ ಶಿಸ್ತು, ಕಾನೂನು ಕ್ರಮ ಹಾಗೂ ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು.

Share This Article
Leave a Comment

Leave a Reply

Your email address will not be published. Required fields are marked *