ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯ ಬೇಡ – ಪೋಷಕರಿಂದ ಅಭಿಯಾನ

Public TV
2 Min Read

– ಪ್ರತಿಷ್ಠಿತ ಶಾಲೆಗಳ ಪೋಷಕರಿಂದ ಅಭಿಯಾನ ಆರಂಭ
– ಅಭಿಯಾನದ ವಿರುದ್ಧ ದೂರು ನೀಡಿದ ನಾಗಾಭರಣ

ಬೆಂಗಳೂರು: ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವುದು ಬೇಡ ಎಂದು ಪೋಷಕರು ಈಗ ಅಭಿಯಾನವನ್ನು ಆರಂಭಿಸಿದ್ದಾರೆ.

ರಾಜ್ಯದ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು ಎಂದು 2015 ರಲ್ಲಿ ಸರ್ಕಾರ ಕಾನೂನು ಜಾರಿ ಮಾಡಿತ್ತು. ಈ ಕಾನೂನು ಸರಿ ಅಲ್ಲ ಎಂದು ಆರೋಪಿಸಿ ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿರುವ ಪೋಷಕರು ಈಗ ಅಭಿಯಾನವನ್ನು ಆರಂಭಿಸಿದ್ದಾರೆ.

 

ಪೋಷಕರು ಹೇಳೋದು ಏನು?
ಸಿಬಿಎಸ್‍ಇ/ಐಸಿಎಸ್‍ಇ ಶಾಲೆಗಳಲ್ಲಿ ಸರ್ಕಾರದ ಕಾನೂನಿನ ಪ್ರಕಾರ ಕಡ್ಡಾಯವಾಗಿ 10ನೇ ತರಗತಿಯವರೆಗೆ ಕನ್ನಡವನ್ನು ಎರಡನೇ ಭಾಷೆಯನ್ನು ಬೋಧಿಸಬೇಕಾಗುತ್ತದೆ. ಇದನ್ನೂ ಓದಿ: ರಾಮನಗರದಲ್ಲಿ ಕನ್ನಡಾಭಿಮಾನ ಮೆರೆದ ತಮಿಳು ಸ್ಟಾರ್ ವಿಜಯ್ ಸೇತುಪತಿ

ಶೈಕ್ಷಣಿಕ ವರ್ಷದಲ್ಲಿ ಕನ್ನಡವನ್ನು ಕಡ್ಡಾಯ ಮಾಡಿದ್ದರಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಉದ್ಯೋಗ ಸಂಬಂಧ ಒಂದೊಂದು ರಾಜ್ಯಗಳಿಗೆ ತೆರಳಬೇಕಾಗುತ್ತದೆ. ಒಂದೊಂದು ರಾಜ್ಯದಿಂದ ವಿದ್ಯಾರ್ಥಿಗಳು ಓದಲು ಬರುತ್ತಾರೆ. ಹೀಗಾಗಿ ಎಲ್ಲೋ ಓದಿ ನಂತರ ಇಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಈ ಕಾನೂನಿನಿಂದ ಸಮಸ್ಯೆಯಾಗುತ್ತದೆ.

5ನೇ ತರಗತಿಯವರೆಗೆ ಕನ್ನಡದಲ್ಲಿ ಬೋಧನೆ ಮಾಡಿದರೆ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ 5 ರಿಂದ 10ನೇ ತರಗತಿಯವರೆಗೆ ಕಡ್ಡಾಯ ಮಾಡಿರುವುದು ಸರಿಯಲ್ಲ ಎಂದು www.change.org  ಮೂಲಕ ಅಭಿಯಾನ ಆರಂಭಿಸಿದ್ದಾರೆ.

ಈ ರೀತಿಯಾಗಿ ಒಂದೊಂದು ರಾಜ್ಯಗಳು ಭಾಷೆಯನ್ನು ಕಲಿಯುವುದನ್ನು ಕಡ್ಡಾಯ ಮಾಡಿದರೆ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಮಕ್ಕಳಿಗೆ ಯಾವ ಭಾಷೆಯಲ್ಲಿ ಶಿಕ್ಷಣ ಕಲಿಸಬೇಕು ಎನ್ನುವುದು ಆಯಾ ಪೋಷಕರಿಗೆ ಬಿಟ್ಟ ವಿಚಾರ. ಬಲವಂತವಾಗಿ ಭಾಷೆ ಕಲಿಯುವಂತೆ ಹೇರಿಕೆ ಮಾಡುವುದು ಸರಿಯಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಕನ್ನಡ ಪರ ಇರುವ ಮಂದಿ ಸರ್ಕಾರ ಸರಿಯಾದ ನಿರ್ಧಾರ ಕೈಗೊಂಡಿದೆ. ಆಯಾ ರಾಜ್ಯಗಳ ಭಾಷೆಯನ್ನು ಕಲಿಸುವುದರಲ್ಲಿ ತಪ್ಪೇನು ಇಲ್ಲ ಕಮೆಂಟ್ ಮಾಡಿದ್ದಾರೆ. ಒಟ್ಟು 2,500 ಮಂದಿ ಸಹಿ ಹಾಕುವ ಉದ್ದೇಶದಿಂದ ಅಭಿಯಾನ ಆರಂಭಿಸಿದ್ದು ಈಗಾಗಲೇ 2 ಸಾವಿರಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ.

ನಾಗಾಭರಣ ಕಿಡಿ:
ಪೋಷಕರ ಅಭಿಯಾನದ ವಿರುದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿಎಸ್ ನಾಗಾಭರಣ ಸಿಟ್ಟಾಗಿದ್ದು, ಶಿಕ್ಷಣ ಸಚಿವ ಸಚಿವ ಸುರೇಶ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.

ಇಂತಹ ಅಭಿಯಾನದ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಕನ್ನಡ ಕಡ್ಡಾಯ ಬೋಧನೆ ನಿಯಮ ಬಿಡಬಾರದು ಎಂದು ಮನವಿ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *