ಕರೆ ಸ್ವೀಕರಿಸಿ, ಸಹಾಯ ಮಾಡಲು ಆಗುತ್ತೋ ಇಲ್ವೋ ಅಷ್ಟೇ ಹೇಳಿ- ಸಚಿವರ ವಿರುದ್ಧ ಬಿಜೆಪಿ ಶಾಸಕ ರಾಜೂಗೌಡ ಗರಂ

Public TV
1 Min Read

ಯಾದಗಿರಿ: ಕೋವಿಡ್ ಉಸ್ತುವಾರಿ ಹೊತ್ತಿರುವ ಸಚಿವರು ದಯವಿಟ್ಟು ನಮ್ಮ ಕರೆ ಸ್ವೀಕರಿಸಿ, ನಮಗೆ ಸಹಾಯ ಮಾಡಲು ಆಗುತ್ತೋ, ಇಲ್ಲವೋ ಅಷ್ಟೇ ಹೇಳಿ ಎಂದು ತಮ್ಮದೇ ಸರ್ಕಾರದ ಸಚಿವರ ವಿರುದ್ಧ ಸುರಪುರ ಬಿಜೆಪಿ ಶಾಸಕ ರಾಜೂಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಕೊಡೆಕಲ್ ಗ್ರಾಮದಲ್ಲಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ವಿಚಾರದಲ್ಲಿ ರಾಜ್ಯದ ಸಚಿವರಿಂದ ಮಲತಾಯಿ ಧೋರಣೆ ಆಗುತ್ತಿದೆ. ಸಚಿವರು ಅವರ ಜಿಲ್ಲೆಯ ಸಮಸ್ಯೆ ಮಾತ್ರ ಬಗೆಹರಿಸಿದರೆ, ಶಾಸಕರು ಇರುವ ಜಿಲ್ಲೆಯವರು ಏನು ಮಾಡಬೇಕು? ನಾವು ಅಧಿಕಾರದಲ್ಲಿದ್ದೇವೆ, ಈ ಸಮಯದಲ್ಲಿ ಜನರ ರಕ್ಷಣೆ ಮಾಡಬೇಕು. ಇದು ಇಡೀ ಕರ್ನಾಟಕಕ್ಕೆ ಸರ್ಕಾರ, ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ. ಎಲ್ಲರೂ ನಾವು ನಂಬರ್ ಒನ್ ಆಗಬೇಕು, ಯಡಿಯೂರಪ್ಪ ಸಿಎಂ ಸ್ಥಾನದಿಂದ ಯಾವಾಗ ಕೆಳಗೆ ಇಳಿಯುತ್ತಾರೋ, ನಾವು ಯಾವಾಗ ಸಿಎಂ ಆಗುತ್ತೇವೋ ಎಂದು ಕನಸು ಕಾಣುತ್ತಿದ್ದಾರೆ. ಸಚಿವರು ಕೇವಲ ಮೀಡಿಯಾ ಮುಂದೆ ಹೇಳಿಕೆ ನೀಡಿ ಸುಮ್ಮನಾಗುತ್ತಿದ್ದಾರೆ, ಎಲ್ಲ ಕಡೆ ಓಡಾಡಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನಮ್ಮ ಮನವಿಗೆ ಸ್ಪಂದಿಸದೆ, ಕಾಟಾಚಾರಕ್ಕೆ ಸಚಿವರಾಗಿರುವವರನ್ನು ಸಿಎಂ ಕಿತ್ತು ಬಿಸಾಕಬೇಕು. ಇಂತಹ ಸಚಿವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಬೇರೆ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‍ಡಿಸಿವಿರ್ ಸಿಗುತ್ತಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಸಿಗುತ್ತಿಲ್ಲ. ಇದು ನಮಗೆ ಬಹಳಷ್ಟು ನೋವು ತಂದಿದೆ. ಯಾರು ಒತ್ತಡ ಹಾಕುತ್ತಾರೋ ಅವರಿಗೆ ಮಾತ್ರ ರೆಮ್‍ಡಿಸಿವಿರ್ ಮತ್ತು ಆಕ್ಸಿಜನ್ ಸೀಗುತ್ತಿದೆ. ನಮಗೆ ದಿನ 250 ರೆಮ್‍ಡಿಸಿವಿರ್ ಬೇಕುಮ ಆದರೆ ನೀಡುತ್ತಿರುವುದು ಕೇವಲ 80 ಮಾತ್ರ. ಉಳಿದ ಔಷಧಿಗಾಗಿ ನಾವು ಏನು ಮಾಡಬೇಕು ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *