ಕರುನಾಡ ಗಡಿಯಲ್ಲಿ ಗರ್ಭಿಣಿಯ ಒದ್ದಾಟ- ಮಕ್ಕಳು, ಮಹಿಳೆಯರನ್ನ ರಾಜ್ಯದೊಳಗೆ ಬಿಡಲು ಬಿಎಸ್‍ವೈ ಸೂಚನೆ

Public TV
2 Min Read

ಉಡುಪಿ: ಏಳು ತಿಂಗಳ ಗರ್ಭಿಣಿಯ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನಸ್ಸು ಕರಗಿದೆ. ಸೇವಾಸಿಂಧು ಆ್ಯಪ್ ಮೂಲಕ ನೋಂದಾಯಿಸದೆ ಮಹಾರಾಷ್ಟ್ರದಿಂದ ಹೊರಟು ಕಳೆದ ಮೂರು ದಿನಗಳಿಂದ ಕರ್ನಾಟಕದ ಗಡಿ ಭಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದವವರ ಪೈಕಿ ಮಕ್ಕಳು, ಮಹಿಳೆಯರು ವೃದ್ಧರನ್ನ ರಾಜ್ಯದೊಳಗೆ ಬಿಡಲಾಗಿದೆ.

ಅಧಿಕೃತ ಪಾಸ್ ಇಲ್ಲದೆ ಮಹಾರಾಷ್ಟ್ರ ಸರ್ಕಾರದ ಪಾಸ್ ಪಡೆದು ಮೂವತ್ತು ಮಂದಿ ಕರಾವಳಿ ಕರ್ನಾಟಕಕ್ಕೆ ಹೊರಟಿದ್ದರು. ನಿಪ್ಪಾಣಿಯಲ್ಲಿ 54 ಮಂದಿಯನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ವಾಪಸ್ ಮಹಾರಾಷ್ಟ್ರಕ್ಕೂ ಹೋಗದ ಸ್ಥಿತಿ ನಿರ್ಮಾಣವಾಗಿತ್ತು. ಮೂರು ದಿನ ಬಸ್ಸಿನಲ್ಲೇ ಎಲ್ಲರೂ ಗಡಿಯಲ್ಲಿರುವ ಪೆಟ್ರೋಲ್ ಪಂಪ್‍ನಲ್ಲಿ ಕಾಲ ಕಳೆದಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಶೋಭಾ ಕರಂದ್ಲಾಜೆ ಕಳೆದ ಎರಡು ದಿನಗಳಿಂದ ಕರಾವಳಿಗರನ್ನು ತವರಿಗೆ ಕರೆಸಿಕೊಳ್ಳಲು ಪ್ರಯತ್ನ ನಡೆಸಿದ್ದರು.

ಮೇ 31ರವರೆಗೆ ಕರ್ನಾಟಕದ ಬಾಗಿಲು ಹೊರ ರಾಜ್ಯದವರಿಗೆ ಬಂದ್ ಆಗಿರುವುದರಿಂದ ಒಳಗೆ ಬಿಡಲು ಸರ್ಕಾರ ಸಿದ್ಧವಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಕೂಡ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರುಗಳಿಗೆ ಗರ್ಭಿಣಿ ಮಹಿಳೆ ಮತ್ತು ಜೊತೆಗಿರುವ ಮಹಿಳೆಯರನ್ನು ಜಿಲ್ಲೆಯೊಳಗೆ ಬಿಟ್ಟು ಕೊಳ್ಳುವಂತೆ ಮನವಿ ಮಾಡಿದ್ದರು. ಎಲ್ಲ ಕಡೆಯಿಂದ ಒತ್ತಡ, ಮನವಿ ಬಂದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಡಿಯಲ್ಲಿ ಸಿಲುಕಿದ್ದ ಗರ್ಭಿಣಿ, ಮಕ್ಕಳು ವೃದ್ಧರು ಮಹಿಳೆಯರು ಮಕ್ಕಳನ್ನು ಒಳಗೆ ಬಿಟ್ಟುಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಿಎಂಗೆ ಧನ್ಯವಾದ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಅಭಿಪ್ರಾಯ ಸಿಎಂಗೆ ಮತ್ತು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದೆವು. ಮಾನವೀಯತೆ ನೆಲೆಯಲ್ಲಿ ನಿಪ್ಪಾಣಿ ಮತ್ತು ಕೊಲ್ಲಾಪುರದಲ್ಲಿ ಸಿಕ್ಕಿ ಹಾಕಿಕೊಂಡಿದ್ದವರನ್ನು ತವರಿಗೆ ಮರಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನುಮುಂದೆ ಸೇವಾ ಸಿಂಧು ಆ್ಯಪ್ ಮೂಲಕ ಪರವಾನಗಿ ಪಡೆಯದೇ ಯಾರೂ ರಾಜ್ಯ ಪ್ರವೇಶ ಮಾಡಲು ಪ್ರಯತ್ನ ಪಡಬೇಡಿ ಎಂದರು.

ಉಡುಪಿ ಡಿಸಿ ಜಿ.ಜಗದೀಶ್ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡಿ, ಗರ್ಭಿಣಿ ಮಹಿಳೆಯನ್ನು ಉಡುಪಿಗೆ ಕಳುಹಿಸುವಂತೆ ಮನವಿ ಮಾಡಿದ್ದರು. ಬರುವ ಎಲ್ಲರನ್ನು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಅಧಿಕೃತ ಸೇವಾಸಿಂಧು ಪಾಸ್ ಇಲ್ಲದೆ ಯಾರೂ ಕರ್ನಾಟಕ ಗಡಿಯಲ್ಲಿ ಒತ್ತಡ ಹಾಕಬೇಡಿ. ಮೇ 31ರ ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಸಚಿವ ಕೋಟ ಅವರಿಗೆ ಸಿಎಂ ಹೇಳಿದ್ದಾರೆ. ಗಡಿಯಲ್ಲಿ ಸಿಲುಕಿದ್ದ ಕರಾವಳಿಗರ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ವರದಿ ಮಾಡಿ, ಅಧಿಕಾರಿಗಳ ಜನಪ್ರತಿನಿಧಿಗಳ ಗಮನ ಸೆಳೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *