ಕನ್ನಡ ಭಾಷೆಗೆ ಸ್ವಾಯತ್ತ ಸ್ಥಾನಮಾನ ನೀಡಬೇಕು: ರಾಜ್ಯಸಭಾ ಸಂಸದ ಡಾ.ಎಲ್ ಹನುಮಂತಯ್ಯ

Public TV
2 Min Read

ನವದೆಹಲಿ: ಶಾಸ್ತ್ರಿಯ ಸ್ಥಾನಮಾನ ಪಡೆದ ಕನ್ನಡ ಭಾಷೆಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕೆಂದು ರಾಜ್ಯಸಭಾ ಸದಸ್ಯರಾದ ಡಾ.ಎಲ್ ಹನುಮಂತಯ್ಯನವರು ರಾಜ್ಯಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು.

2008 ರಲ್ಲಿಯೇ ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಶಾಸ್ತ್ರೀಯ ಭಾಷಾ ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕೆಂದು ಕರ್ನಾಟಕ ಸರ್ಕಾರ ಸೇರಿದಂತೆ, ಕನ್ನಡ ಭಾಷಾ ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರು ಅನೇಕ ವರ್ಷಗಳಿಂದ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇತ್ತೀಚಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಮೈಸೂರಿನ ‘ಭಾರತೀಯ ಭಾಷಾ ಕೇಂದ್ರವನ್ನು’ ಹಾಗೂ “ಭಾರತೀಯ ಅನುವಾದ ಮತ್ತು ವ್ಯಾಖ್ಯಾನ ಸಂಸ್ಥೆಯನ್ನು” ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನಾಗಿ (ಬಿಬಿವಿ) ಪರಿವರ್ತಿಸಲು ಪ್ರಸ್ತಾಪ ನೀಡಿದೆ. ಕೇಂದ್ರ ಸರ್ಕಾರವು ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಶಾಸ್ತ್ರೀಯ ಭಾಷಾ ಸಂಸ್ಥೆಗಳನ್ನು ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನಾಗಿ (ಬಿಬಿವಿ) ಅಡಿಯಲ್ಲಿ ತರಲು ಎನ್ ಗೋಪಾಲಸ್ವಾಮಿ ಅವರ ಅಧ್ಯಕ್ಷೆಯಲ್ಲಿ ಸಮಿತಿ ರಚಿಸಿ ಕೆಲವು ನಿಯಮಗಳನ್ನು ನೀಡಿ ಸಲಹೆಗಳನ್ನು ಕೋರಿದೆ.

ನಾವು ಬೇಡಿಕೆಯಿಟ್ಟಿದ್ದು ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಶಾಸ್ತ್ರೀಯ ಭಾಷಾ ಸಂಸ್ಥೆಯು ಸ್ವಾಯತ್ತತೆ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕೆಂದು. ಆದರೆ ಕೇಂದ್ರ ಸರ್ಕಾರ ಇಲ್ಲಿ ಎಲ್ಲಾ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದ ಶಾಸ್ತ್ರೀಯ ಭಾಷಾ ಸಂಸ್ಥೆಗಳನ್ನು ಭಾರತೀಯ ಭಾಷಾ ವಿಶ್ವವಿದ್ಯಾಲಯದ ಅಧೀನದಲ್ಲಿ ತರಲು ಪ್ರಯತ್ನಿಸುತ್ತಿದೆ.

ಇದು ಪ್ರತ್ಯೇಕ ಹಾಗು ಸ್ವಾಯತ್ತತೆ ಇಲ್ಲದ ಯಾವುದೇ ಶಾಸ್ತ್ರೀಯ ಭಾಷೆಯ ಸಂಸ್ಥೆಗಳ ಬೆಳವಣಿಗೆಗೆ ಹಾನಿಕಾರ. ನಾನು ಸೇರಿದಂತೆ ರಾಜ್ಯದ ನಿಯೋಗದೊಂದಿಗೆ ಕೇಂದ್ರ ಸರ್ಕಾರದ ಈ ಹಿಂದಿನ ಮಾನವ ಸಂಪನ್ಮೂಲ ಸಚಿವರುಗಳಾದ ಸ್ಮೃತಿ ಇರಾಣಿ, ಪ್ರಕಾಶ್ ಜಾವಡೇಕರ್ ಸೇರಿದಂತೆ ಪ್ರಸ್ತುತ ಮಾನವ ಸಂಪನ್ಮೂಲ ಸಚಿರಿಗೂ ಸಹ ಕನ್ನಡ ಭಾಷೆಗೆ ಸ್ವಾಯತ್ತ ಸ್ಥಾನಮಾನ ನೀಡುವುದರ ಬಗ್ಗೆ ಪ್ರಸ್ಥಾಪ ನೀಡಿದ್ದೇವೆ. ಮೂವರು ಸಚಿವರೂ ಕೂಡ ಈ ಪ್ರಸ್ಥಾಪನೆಯನ್ನು ಒಪ್ಪಿ ಕನ್ನಡಕ್ಕೆ ಸ್ವಾಯತ್ತತೆ ಸ್ಥಾನಮಾನವನ್ನು ಕೊಡುವುದರ ಬಗ್ಗೆ ಖಚಿತಪಡಿಸಿದ್ದರೂ. ಆದರೆ ಇಲ್ಲಿಯವರೆಗೂ ಸಹ ನೀಡಲಾಗಿಲ್ಲ.

ಈ ಸ್ವಾಯತ್ತ ಸ್ಥಾನಮಾನ ನೀಡದ ಹೊರತಾಗಿ ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಭಾಷೆಗಳ ಕೆಲಸ ಪರಿಪೂರ್ಣಗೊಳ್ಳುವುದಿಲ್ಲ. ಅದಕ್ಕೆ ಉದಾಹರಣೆಯೆಂದರೆ ಕೇಂದ್ರ ಸರ್ಕಾರ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನದ ಜೊತೆಗೆ ಸ್ಯಾಯತ್ತ ಸ್ಥಾನಮಾನವನ್ನು ಸಹ ನೀಡಿದ್ದರಿಂದ ಅಲ್ಲಿ ಅತ್ಯುತ್ತಮ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಆದರೆ ಉಳಿದ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನವನ್ನು 2008 ರಲ್ಲಿಯೇ ನೀಡಿದ್ದರೂ ಸಹ ಸ್ವಾಯತ್ತತೆಯ ಸ್ಥಾನಮಾನವನ್ನು ಇನ್ನು ನೀಡಲಾಗಿಲ್ಲ. ಉಳಿದ ಭಾಷೆಗಳಿಗೆ ಇನ್ನು ಯಾಕೆ ಈ ಸ್ಥಾನಮಾನವನ್ನು ನೀಡಲಾಗುತ್ತಿಲ್ಲವೆಂದು ಸರ್ಕಾರ ಉತ್ತರಿಸಬೇಕಿದೆ ಮತ್ತು ಅದರ ಬಗ್ಗೆ ಸರ್ಕಾರ ಹೆಚ್ಚಿನ ಒಲವು ತೋರಿಸಿ ಒಂದು ನಿರ್ಧಾರಕ್ಕೆ ಬರಬೇಕೆಂದು ಕರ್ನಾಟಕದ ರಾಜ್ಯಸಭಾ ಸದಸ್ಯರಾದ ಎಲ್ ಹನುಮಂತಯ್ಯನವರು ರಾಜ್ಯಸಭಾ ಶ್ಯೂನ್ಯ ವೇಳೆಯಲ್ಲಿ ಸಭಾಪತಿಯವರಾದ ಎಂ. ವೆಂಕಯ್ಯನಾಯ್ಡು ರವರ ಬಳಿ ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *