ಕನ್ನಡದಲ್ಲಿ ಧನ್ಯವಾದ ತಿಳಿಸಿದ ಸ್ಪಿನ್ನರ್ ಅಶ್ವಿನ್

Public TV
2 Min Read

ಬೆಂಗಳೂರು: ತನ್ನ ಹುಟ್ಟುಹಬ್ಬಕ್ಕೆ ಶುಭಕೋರಿದ ಸ್ಟಾರ್ ಸ್ಫೋರ್ಟ್ಸ್ ಕನ್ನಡ ವಾಹಿನಿಗೆ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಕನ್ನಡದಲ್ಲೇ ಪ್ರತಿಕ್ರಿಯೆ ನೀಡುವ ಮೂಲಕ ಕರುನಾಡ ಜನರ ಮನಗೆದ್ದಿದ್ದಾರೆ.

ಭಾರತ ಕ್ರಿಕೆಟ್ ತಂಡದ ಅನುಭವಿ ಅಫ್ ಸಿನ್ನರ್ ರವಿಚಂದ್ರನ್ ಅಶ್ವಿನ್ ಅವರು, ನಿನ್ನೆ ತನ್ನ 34ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸದ್ಯ ಐಪಿಎಲ್ ಆಡಲು ಯುಎಇಗೆ ತೆರಳಿರುವ ಅವರು, ಈ ಬಾರಿ ಡೆಲ್ಲಿ ಕ್ಯಾಪಿಟಲ್ ತಂಡದ ಪರವಾಗಿ ಆಡಲಿದ್ದಾರೆ. ಸದ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಕನ್ನಡದಲ್ಲಿ ಟ್ವೀಟ್ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಶ್ವಿನ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಟ್ವೀಟ್ ಮಾಡಿದ್ದ ಸ್ಟಾರ್ ಸ್ಫೋರ್ಟ್ಸ್ ಕನ್ನಡ, ಮೈಂಡ್ ಗೇಮ್ಸ್ ನಲ್ಲಿ ಚಾಣಾಕ್ಷ, ಟೆಸ್ಟ್ ನಲ್ಲಿ ವೇಗವಾಗಿ 100 ವಿಕೆಟ್‍ಗಳ ಗಡಿ ದಾಟಿದ ಭಾರತದ ಬೌಲರ್. ಟೆಸ್ಟ್, ಏಕದಿನ ಮತ್ತು ಟಿ-20 ಎಲ್ಲ ಮಾದರಿಗೂ ಒಗ್ಗಿಕೊಳ್ಳುವ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಜನ್ಮದಿನದ ಶುಭಾಶಯಗಳು. ವೀಕ್ಷಕರೇ, ಅಶ್ವಿನ್ ಅವರ ಯಾವ ಪ್ರದರ್ಶನ ನಿಮಗಿಷ್ಟ, ಕಾಮೆಂಟ್ ಮಾಡಿ ಎಂದು ಟ್ವೀಟ್ ಮಾಡಿತ್ತು.

ಇದಕ್ಕೆ ಉತ್ತರಿಸಿದ ಅಶ್ವಿನ್ ಅವರು, ನನ್ನ ಜನ್ಮದಿನದೊಂದು ನೀವು ಪ್ರೀತಿ ಪೂರ್ವಕವಾಗಿ ಕಳುಹಿಸಿದ ಶುಭಾಶಯಕ್ಕೆ ಧನ್ಯವಾದಗಳು ಎಂದು ಕನ್ನಡದಲ್ಲಿ ರಿಪ್ಲೈ ಮಾಡಿದ್ದಾರೆ. ಇದನ್ನು ಕಂಡ ಕನ್ನಡದ ಕ್ರಿಕೆಟ್ ಅಭಿಮಾನಿಗಳು ಫುಲ್ ಕುಶ್ ಆಗಿದ್ದಾರೆ. ಅಶ್ವಿನ್ ಅವರು ಕನ್ನಡದಲ್ಲಿ ಟ್ವೀಟ್ ಮಾಡುತ್ತಿದ್ದಂತೆ ಕಮೆಂಟ್ ಮಾಡಿರುವ ಕನ್ನಡಿಗರು, ನಿಮ್ಮ ಬಾಯಲ್ಲಿ ಕನ್ನಡ ಕೇಳಿ ಬಹಳ ಸಂತೋಷವಾಯಿತು, ಧನ್ಯವಾದಗಳು ಮತ್ತು ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.

ಅಶ್ವಿನ್ ಅವರು ಭಾರತದ ಪರವಾಗಿ 71 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 365 ವಿಕೆಟ್‍ಗಳನ್ನು ಗಳಿಸಿದ್ದಾರೆ. ಜೊತೆಗೆ 111 ಏಕದಿನ ಪಂದ್ಯಗಳನ್ನು ಆಡಿದ್ದು, 150 ವಿಕೆಟ್ ಕಿತ್ತಿದ್ದಾರೆ. ಐಪಿಎಲ್‍ನಲ್ಲಿ ಸ್ಟಾರ್ ಬೌಲರ್ ಆಗಿರುವ ಅಶ್ವಿನ್ ಒಟ್ಟು 139 ಪಂದ್ಯಗಳನ್ನಾಡಿ 125 ವಿಕೆಟ್ ಪಡೆದಿದ್ದಾರೆ. 46 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನಾಡಿರುವ ಅವರು, 52 ವಿಕೆಟ್ ಗಳಿಸಿದ್ದಾರೆ.

2020ರ ಜನವರಿಲ್ಲಿ ಸ್ಟಾರ್ ಸ್ಫೋರ್ಟ್ಸ್ ವಾಹಿನಿ ಕನ್ನಡದಲ್ಲಿ ಟ್ವಿಟ್ಟರ್ ಅಕೌಂಟ್ ಆರಂಭ ಮಾಡಿದೆ. ಸದ್ಯ ಸ್ಟಾರ್ ಸ್ಫೋರ್ಟ್ಸ್ ಕನ್ನಡ ಟ್ವಿಟ್ಟರ್ ಅಕೌಂಟ್ ಅನ್ನು 12 ಸಾವಿರ ಜನ ಫಾಲೋ ಮಾಡುತ್ತಿದ್ದಾರೆ. ಸ್ಟಾರ್ ಸ್ಫೋರ್ಟ್ಸ್ ತಮಿಳು ಖಾತೆಯನ್ನು 80 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *