ಕಣ್ಣು ಬಿಟ್ಟಿದ್ದ ದೇವರ ಕಣ್ಣನ್ನು ಪೂಜಾರಿ ಕೈಯಿಂದಲೇ ತೆಗೆಸಿದ ತಹಶೀಲ್ದಾರ್

Public TV
2 Min Read

ಚಿಕ್ಕೋಡಿ: ಕಣ್ಣು ಬಿಟ್ಟಿದ್ದ ದೇವಿ ವಿಗ್ರಹದ ಕಣ್ಣನ್ನು ಪೂಜಾರಿ ಕೈಯಿಂದಲೇ ತಹಶೀಲ್ದಾರ್ ತೆಗೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ.

ದೇವಸ್ಥಾನದಲ್ಲಿನ ದೇವಿಯ ವಿಗ್ರಹ ಕಣ್ಣು ಬಿಟ್ಟಿದೆ. ಇದು ಕೊರೊನಾ ಪ್ರಪಂಚದಿಂದ ತೊಲಗುವ ಸಂದೇಶ ಎಂದು ಆ ಊರಿನ ಜನ ಗುಲ್ಲೆಬ್ಬಿಸಿದ್ದರು. ಊರಿನ ಜನ ಅಷ್ಟೇ ಅಲ್ಲದೇ ಪರ ಊರಿನ ಜನರೂ ಸಹ ದೇವಿ ಕಣ್ಬಿಟ್ಟಿದ್ದಾಳೆ ಎಂದು ದೇವಾಲಯಕ್ಕೆ ಬಂದು ಕಾಯಿ ಕರ್ಪೂರ ನೀಡಿ ದೇವಿಗೆ ಸೇವೆ ಸೇವೆ ಸಲ್ಲಿಸಿದ್ದರು. ಆದರೆ ದೇವಿ ಕಣ್ಣು ಬಿಟ್ಟಿದ್ದ ಹಿಂದಿನ ರಹಸ್ಯವನ್ನು ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರು ಬೇಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಸಂತೂಬಾಯಿ ದೇವಸ್ಥಾನದ ದೇವಿ ಕೆಲ ದಿನಗಳ ಹಿಂದೆ ಕಣ್ಣು ಬಿಟ್ಟಿದ್ದಳು. ಅದನ್ನ ನೋಡುವುದಕ್ಕೆಂದು ಅಲ್ಲಿ ಭಕ್ತ ಸಾಗರವೇ ಹರಿದು ಬರತೊಡಗಿತ್ತು. ಕೆಲವರಂತೂ ಇದು ಕೊರೊನಾ ಪ್ರಪಂಚವನ್ನು ಬಿಟ್ಟು ಹೊರಡುವ ಶುಭ ಸುದ್ದಿ ಎಂದೇ ಬಣ್ಣಿಸಿದ್ದರು.

ದೇವಿ ಕಣ್ಣು ಬಿಟ್ಟಿರುವ ಹಾಗೂ ಅಲ್ಲಿಗೆ ದಿನಂ ಪ್ರತಿ ಭಕ್ತರು ಭೇಟಿ ನೀಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿ ಕಡೆಗೆ ಈ ಸುದ್ದಿ ಕಾಗವಾಡ ತಹಶೀಲ್ದಾರ್ ಪ್ರಮಿಳಾ ದೇಶಪಾಂಡೆಯವರ ಗಮನಕ್ಕೆ ಬಂದಿದೆ. ದೇವಿ ಹೇಗೆ ಕಣ್ಣು ಬಿಟ್ಟಿದ್ದಾಳೆ? ದೇವಿಯೇ ಕಣ್ಣು ಬಿಟ್ಟಳೋ ಅಥವಾ ಯಾರಾದರು ಕಣ್ಣು ಬಿಡಿಸಿದರೋ ಎಂಬುದನ್ನ ಪರಿಶೀಲಿಸಲು ಅಲ್ಲಿಗೆ ಕಾಗವಾಡ ತಹಶೀಲ್ದಾರ್ ತಮ್ಮ ಸಿಬ್ಬಂದಿಯ ಜತೆ ತೆರಳಿ ಪರಿಶೀಲಿಸಿದಾಗ ದೇವಿ ಕಣ್ಣು ಬಿಟ್ಟಿರುವ ಹಿಂದಿನ ರಹಸ್ಯ ಗೊತ್ತಾಗಿದೆ.

ದೇವಿಯ ಮೂರ್ತಿಗೆ ಕೃತಕ ಕಣ್ಣು ಜೋಡಿಸಿ ಜನರಿಗೆ ಮಂಕು ಬೂದಿ ಎರಚಲು ಯತ್ನಿಸಿದವರಿಗೆ ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡಿದ್ದು, ದೇವಿಗೆ ಅಂಟಿಸಿದ್ದ ಕೃತಕ ಕಣ್ಣು ತೆಗೆಸಿದ್ದಾರೆ. ದೇವಿಗೆ ಕಣ್ಣು ಬಿಡಿಸಿ ಜನರ ಬುದ್ದಿಗೆ ಮಂಕೆರಚಲು ಯತ್ನಿಸಿದ್ದವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ತಹಶೀಲ್ದಾರ್ ಇನ್ನೊಂದು ಬಾರಿ ಇಂತಹ ಕಿತಾಪತಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಗೆ ದೇವಿ ಕಣ್ಣು ಬಿಟ್ಟ ಪ್ರಹಸನ ಸುಖಾಂತ್ಯಗೊಂಡಿದೆ. ಇದನ್ನೂ ಓದಿ:ರಸ್ತೆಯಲ್ಲಿ ಎತ್ತು, ಎಮ್ಮೆ, ಹಸುಗಳ ಮಾರಾಟ ಜೋರು

Share This Article
Leave a Comment

Leave a Reply

Your email address will not be published. Required fields are marked *