ಕಣಕುಂಬಿ ಕಾಡಲ್ಲಿ ಮಂಜಿನ ಮ್ಯಾಜಿಕ್- ಪ್ರವಾಸಿಗರನ್ನು ಕೈ ಬೀಸಿ ಕರೀತಿದೆ ಭೂಲೋಕದ ಸ್ವರ್ಗ

Public TV
1 Min Read

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಜಿಲ್ಲೆಯ ಜನ ಒಂದು ಸ್ಥಳದತ್ತ ಮುಖ ಮಾಡುತ್ತಿದ್ದಾರೆ. ನಿಸರ್ಗದ ಮಡಿಲಲ್ಲಿ ಮಂಜಿನಾಟ ನೋಡುಗರ ಕಣ್ಣಿಗೆ ಹಬ್ಬ. ಕೊರೊನಾ ಆತಂಕ, ಪ್ರವಾಹ ಫಜೀತಿಯಿಂದ ಬೇಸತ್ತ ಜನ ಪ್ರಕೃತಿಯ ಸೊಬಗಿಗೆ ಮೈವೊಡ್ಡುತ್ತಿದ್ದಾರೆ.

ಹೌದು. ಕಣ್ಣು ಹಾಯಿಸಿದಲ್ಲೆಲ್ಲ ಹಚ್ಚ ಹಸಿರು. ಭೂಮಿ-ಆಕಾಶ ಒಂದಾದಂತೆ ಭಾಸವಾಗುತ್ತಿರುವ ಪ್ರಕೃತಿಯ ಅಂದ. ಇದೆಲ್ಲದರ ಮಧ್ಯೆ ಮಂಜಿನ ಮ್ಯಾಜಿಕ್, ಬೆಟ್ಟ-ಗುಡ್ಡಗಳು ಕಾಣದಷ್ಟು ಮಂಜಿನ ನಲಿವು. ಮೈ ಜುಮ್ಮೆನಿಸುವ ಚಳಿ, ತುಂತುರು ಮಳೆ. ಇದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಅರಣ್ಯವ್ಯಾಪ್ತಿಯ ಗ್ರಾಮಗಳಲ್ಲಿ ನಿಸರ್ಗ ಸೃಷ್ಠಿಸಿರೋ ಅದ್ಭುತ.

ಕಣಕುಂಬಿ ಅರಣ್ಯ ವ್ಯಾಪ್ತಿಯ ಜಾಂಬೋಟಿ, ಚಿಕಳೆ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಬೆಟ್ಟ ಗುಡ್ಡಗಳೇ ಕಾಣದಷ್ಟು ಮಂಜು ಮುತ್ತಿಕೊಂಡಿದೆ. ಒಂದು ಕ್ಷಣ ಬಿಸಿಲು ಮತ್ತೊಂದು ಕ್ಷಣ ಚಳಿ. ನೆರಳು ಬೆಳಕಿನಾಟದ ಮಧ್ಯೆ ಮಂಜಿನ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ. ಕೊರೊನಾ ಆತಂಕ, ಲಾಕ್‍ಡೌನ್, ವರುಣಾರ್ಭಟಕ್ಕೆ ಬೇಸತ್ತ ಜನ ಈಗ ನಿರಾಳರಾಗಿದ್ದಾರೆ. ಹೀಗಾಗಿಯೇ ಕುಟುಂಬ ಸಮೇತವಾಗಿ ನಿಸರ್ಗದತ್ತ ಮುಖ ಮಾಡುತ್ತಿದ್ದಾರೆ.

ಗೋವಾಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಚಿಕಳೆ, ಜಾಂಬೋಟಿ ಗ್ರಾಮಗಳು ಬರೋದ್ರಿಂದ ಮುಖ್ಯ ರಸ್ತೆಯಿಂದ 10 ರಿಂದ 15 ಕಿಲೋಮೀಟರ್ ಸಾಗಿ ಒಂದೆರಡು ಕಿಲೋಮೀಟರ್ ವಾಕ್ ಹೋದ್ರೆ ಸಾಕು ನಿಸರ್ಗದ ವೈಭವ ಕಣ್ಮುಂದೆ ಬರುತ್ತೆ. ಪ್ರವಾಸಿಗರು ಮನಸ್ಸು ನಿರ್ಮಲವಾಗಿಸಿಕೊಂಡು ನಿಸರ್ಗದ ಅಂದವನ್ನು ಸವಿಯುತ್ತಾ ಸಂಚರಿಸುತ್ತಾರೆ. ಮಂಜಿನ ಮಧ್ಯೆ ಪ್ರವಾಸಿಗರಿಂದ ಸೆಲ್ಫಿ ಸುರಿಮಳೆಯೇ ಸುರಿಯುತ್ತೆ.

ಒಟ್ಟಿನಲ್ಲಿ ಏಳೆಂಟು ತಿಂಗಳಿಂದ ಮನೆಯಲ್ಲಿ ಕುಳಿತು ಬೇಜಾರಾಗಿದ್ದ ಜನ ನಿಸರ್ಗದತ್ತ ಮುಖ ಮಾಡಿ ರಿಲ್ಯಾಕ್ಸ್ ಆಗುತ್ತಿರುವುದಂತು ಸುಳ್ಳಲ್ಲ.

Share This Article
Leave a Comment

Leave a Reply

Your email address will not be published. Required fields are marked *