‘ಕಟ್ಟೋಣ ಬಾಳಿಗೊಂದು ಸೂರು’- ವಾಟ್ಸಪ್ ಗ್ರೂಪ್‍ನಿಂದ ಮನೆ ನಿರ್ಮಾಣ

Public TV
2 Min Read

– ಲಾಕ್‍ಡೌನ್‍ನಲ್ಲೇ ಬಡ ಕುಟುಂಬದ ಹೊಸ ಮನೆಯ ಲಾಕ್ ಓಪನ್

ಮಂಗಳೂರು: ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಎಲ್ಲರೂ ಮನೆಯೊಳಗಿದ್ದು ಆರೋಗ್ಯ ಮತ್ತು ಭವಿಷ್ಯದ ಚಿಂತೆಯಲ್ಲಿದ್ದರೆ ಜಿಲ್ಲೆಯ ಯುವಕರ ಗುಂಪೊಂದು ಮತ್ತೊಬ್ಬರ ಬದುಕು ಕಟ್ಟುವ ಕೆಲಸ ಮಾಡಿದೆ.

ಹೌದು.. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಚೆನ್ನಾವರ ಅಭ್ಯುದಯ ಯುವಕ ಮಂಡಲ ಮತ್ತು ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ವಾಟ್ಸಪ್ ಗ್ರೂಪ್ ರಚಿಸಿದ್ದಾರೆ. ಅವರು ದಾನಿಗಳ ನೆರವಿನ ಜೊತೆಗೆ ಶ್ರಮದಾನದ ಮೂಲಕ ಬಡ ಕುಟುಂಬವೊಂದಕ್ಕೆ ಮನೆ ಕಟ್ಟಿ ಮಾದರಿಯಾಗಿದ್ದಾರೆ.

ಈ ಎರಡು ಯುವಕ ಮಂಡಲದ ಸದಸ್ಯರು ಶ್ರಮದಾನ ನಡೆಸುವ ಮೂಲಕ ಅಸಹಾಯಕ ಕುಟುಂಬವೊಂದಕ್ಕೆ ಆಸರೆಯಾಗಿದ್ದಾರೆ. ಸುಮಾರು 2.5 ಲಕ್ಷ ರೂ.ವೆಚ್ಚದಲ್ಲಿ ಮನೆಯೊಂದನ್ನು ನಿರ್ಮಿಸಿ ಹಸ್ತಾಂತರಿಸಲು ಸಿದ್ಧತೆ ನಡೆಸಿದ್ದಾರೆ. ಸವಣೂರು ಗ್ರಾಮ ಪಂಚಾಯತ್‍ನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕದ ಮಾಣಿ ಎಂಬವರ ಮಗಳು ಸುಂದರಿ ಅವರು ತನ್ನ ಮಕ್ಕಳಾದ ಆಶಾ, ಧನ್ವಿ, ಸನತ್ ಜತೆ ಸಣ್ಣ ಟರ್ಪಾಲ್ ಕಟ್ಟಿದ ಜೋಪಡಿಯಲ್ಲಿ ವಾಸವಾಗಿದ್ದಾರೆ. ಕಟ್ಟಿಗೆ ದಾಸ್ತಾನಿನಂತಿರುವ ಸಣ್ಣ ಮನೆ, ಅಡುಗೆ ಕೋಣೆಯಿಂದ ಹಿಡಿದು ಎಲ್ಲವೂ ಅದರಲ್ಲಿಯೇ ನಡೆಯಬೇಕು.

ಮಳೆ ಬಂದರೆ ಸೋರುವ ಮೇಲ್ಛಾವಣಿ, ಭದ್ರತೆ ಇಲ್ಲವೇ ಇಲ್ಲ ಇಂತಹ ಅಸಹಾಯಕ ಸ್ಥಿತಿಯಲ್ಲಿಯೇ ಸುಂದರಿ ಅವರ ಜೀವನ ಕಳೆಯುತ್ತಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ಇಲ್ಲಿನ ಯುವಕ ಮಂಡಲ ಹಾಗೂ ಸೇವಾ ಭಾರತಿ ವತಿಯಿಂದ ಆಹಾರದ ಕಿಟ್ ಕೊಡುವ ಸಂದರ್ಭದಲ್ಲಿ ಅವರ ದಯನೀಯ ಸ್ಥಿತಿ ಕಂಡಿದ್ದರು. ಮಳೆಗಾಲದಲ್ಲಿ ಇಂತಹ ಮನೆಯಲ್ಲಿರುವುದು ಕಷ್ಟಕರ ಎಂಬುದನ್ನು ಅರಿತು ಯುವಕರು ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು.

ಸುಂದರಿ ಅವರ ಮನೆಯ ದಾಖಲೆ ಪತ್ರಗಳು ಸರಿಯಿಲ್ಲದ ಕಾರಣ ಸರ್ಕಾರದ ನಿವೇಶನವೂ ದೊರಕಿರಲಿಲ್ಲ. ಇದಕ್ಕಾಗಿ ವಾಟ್ಸಪ್‍ನಲ್ಲಿ “ಕಟ್ಟೋಣ ಬಾಳಿಗೊಂದು ಸೂರು” ಎಂಬ ಗುಂಪು ರಚಿಸಲಾಗಿತ್ತು. ಅದರಲ್ಲಿ ದಾನಿಗಳನ್ನು ಸೇರಿಸಿ, ಯುವಕ ಮಂಡಳಿಗಳ ಸದಸ್ಯರನ್ನು ಸೇರಿಸಿ ಕಾರ್ಯೋನ್ಮುಖರಾದರು. ಇದೀಗ ಮನೆ ನಿರ್ಮಾಣದ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿದೆ.

ಗ್ರಾಮ ಪಂಚಾಯತಿಯ ಕುಡಿಯುವ ನೀರಿನ ಸಂಪರ್ಕ ಬಿಟ್ಟರೆ ಬೇರೆ ಯಾವುದೇ ನೀರಿನ ಆಶ್ರಯ ಇಲ್ಲದಿರುವುದರಿಂದ ಪುತ್ತೂರು ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಅವರು ಉದ್ಯೋಗ ಖಾತರಿ ಯೋಜನೆಯ ಮೂಲಕ ಬಾವಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದರು. ಜೂನ್ 5ರೊಳಗೆ ಮನೆ ನಿರ್ಮಾಣ ಪೂರ್ಣಗೊಳಿಸಿ ಕುಟುಂಬಕ್ಕೆ ಹಸ್ತಾಂತರ ಮಾಡುವ ಇರಾದೆ ಈ ತಂಡಕ್ಕೆ ಇದೆ.

ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸಮೀಪದಲ್ಲಿ ನಿರ್ಗತಿಕ ಕುಟುಂಬವೊಂದಕ್ಕೆ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯ ಸತೀಶ್ ಅಂಗಡಿಮೂಲೆ, ಸಾಮಾಜಿಕ ಕಾರ್ಯಕರ್ತ,ವಿದ್ಯುತ್ ಗುತ್ತಿಗೆದಾರ ಸುಬ್ರಾಯ ಗೌಡ ಅವರ ನೇತೃತ್ವದಲ್ಲಿ ಚೆನ್ನಾವರ ಅಭ್ಯುದಯ ಯುವಕ ಮಂಡಲ ಮತ್ತು ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ಇದರ ಸಹಭಾಗಿತ್ವದಲ್ಲಿ ಮನೆ ನಿರ್ಮಾಣ ಮಾಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *