ಕಟ್ಟುನಿಟ್ಟಾಗಿ ಲಾಕ್‍ಡೌನ್ ಪಾಲಿಸಿ, ಕೊರೊನಾ ಮುಕ್ತ ಮೈಸೂರಿಗೆ ಸಹಕರಿಸಿ – ಜನತೆಗೆ ಎಸ್‍ಟಿಎಸ್ ಕರೆ

Public TV
2 Min Read

– ಮೇ 29ರಿಂದ ಜೂನ್ 7ರವರೆಗೆ ಮೈಸೂರು ಲಾಕ್
– ವಾರದಲ್ಲಿ 2 ದಿನ ತರಕಾರಿ, ದಿನಸಿ ಖರೀದಿಗೆ ಅವಕಾಶ
– ಮೈಸೂರು ಜನ ಸಹಕರಿಸುವಂತೆ ಸಚಿವರ ಮನವಿ

ಬೆಂಗಳೂರು: ಮೈಸೂರು ಜಿಲ್ಲೆಯಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಕೊರೊನಾ ಸೋಂಕು ಪ್ರಕರಣಗಳು ತಹಬದಿಗೆ ಬಾರದ ಕಾರಣ ಮೇ 29ರಿಂದ ಜೂನ್ 7ರವರೆಗೆ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿದ್ದು, ಜಿಲ್ಲಾಧಿಕಾರಿಗಳಿಂದ ಈಗಾಗಲೇ ಆದೇಶ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಮಹಾಜನತೆ ಇದಕ್ಕೆ ಸಹಕರಿಸಿ, ಜಿಲ್ಲೆಯನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ಸಹಕಾರ ನೀಡಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಕರೆ ನೀಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಸಹ ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಕೈಮೀರುವ ಸಾಧ್ಯತೆ ಇದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್ ಡೌನ್ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಲ್ಲದೆ ಈ ಬಗ್ಗೆ ಈಗಾಗಲೇ ಜಿಲ್ಲೆಯ ಎಲ್ಲ ತಹಶೀಲ್ದಾರ್ ಗಳು ಹಾಗೂ ಜಿಲ್ಲಾ ಹಾಗೂ ತಾಲೂಕುಗಳ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಖರೀದಿಗಿರುವ 2 ದಿನದ ಅವಕಾಶದಲ್ಲಿ ಎಚ್ಚರದಿಂದಿರಿ:
ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜೊತೆಗೆ ಸಾರ್ವಜನಿಕರಿಗೂ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಸೋಮವಾರ ಹಾಗೂ ಗುರುವಾರ ಎರಡು ದಿನ ಕೆಲವು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಹಾಲು, ಮೊಸರು ಪ್ರತಿ ದಿನ ಲಭ್ಯವಾಗಲಿದ್ದು, ಖರೀದಿ ಪ್ರಕ್ರಿಯೆಗೆ ಜಿಲ್ಲಾಡಳಿತ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ವಾರದಲ್ಲಿ 2 ದಿನ ಅಗತ್ಯ ವಸ್ತುಗಳಿಗೆ ಅವಕಾಶ ನೀಡಿದ್ದನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಯಾರೂ ಆತಂಕಗೊಳ್ಳದೆ ಸಮಾಧಾನದಿಂದ ವಸ್ತುಗಳನ್ನು ಖರೀದಿಸಬೇಕು. ಅಂದರೆ ಅಂಗಡಿಗಳ ಮುಂದೆ ಗುಂಪು ಸೇರುವುದು, ಮುಗಿ ಬೀಳುವಂತಹ ಕಾರ್ಯಗಳನ್ನು ಮಾಡಬಾರದು. ಸಾಮಾಜಿಕ ಅಂತರವನ್ನು ಎಲ್ಲರೂ ಪಾಲಿಸುವುದರ ಜೊತೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆಯನ್ನೂ ಸಹ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೋಮಶೇಖರ್ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *