ಕಗ್ಗಂಟಾಗ್ತಿದೆ ಕ್ಯಾಬಿನೆಟ್ ಜೇನುಗೂಡು- ದೆಹಲಿ ಮಟ್ಟದಲ್ಲಿ ಹಿರಿಯ ನಾಯಕರ ಲಾಬಿ

Public TV
2 Min Read

– ಸರ್ಕಾರ ತಂದ ವಲಸಿಗರ ಬೆನ್ನಿಗೆ ನಿಂತ ಬಿಎಸ್‍ವೈ?

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆಗೆ ಈಗ ಪೈಪೋಟಿ ಜೋರಾಗಿದೆ. ಈ ಹಿಂದೆ ಬಿಎಸ್‍ವೈ ಸಂಪುಟದಲ್ಲಿದ್ದ ಹಿರಿಯ ಸಚಿವರು ನಾ ಮುಂದು…ತಾ ಮುಂದು ಅಂತ ದೆಹಲಿಗೆ ದೌಡಾಯಿಸಿದ್ದಾರೆ. ಸಚಿವ ಸ್ಥಾನ ಕೈ ತಪ್ಪೋ ಆತಂಕದಲ್ಲಿ ಮಾಜಿ ಸಚಿವರಾದ ಆರ್. ಅಶೋಕ್ ಹಾಗೂ ಉಮೇಶ್ ಕತ್ತಿ ದೆಹಲಿಗೆ ಹಾರಿದ್ದಾರೆ. ಯಡಿಯೂರಪ್ಪ ವಿರುದ್ಧ ಬಂಡಾಯ ಸಾರಿದ್ದ ಮತ್ತೊಬ್ಬ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕೂಡ ಸಂಜೆ ದೆಹಲಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಯೋಗೇಶ್ವರ್‍ಗೆ ಸಚಿವ ಸ್ಥಾನ ಡೌಟ್ ಎನ್ನಲಾಗುತ್ತಿದ್ದು, ಲಾಬಿ ನಡೆಸಲು ಅರವಿಂದ್ ಬೆಲ್ಲದ್ ಕೂಡ ದೆಹಲಿಗೆ ತೆರಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಧಿಕಾರದಿಂದ ಕೆಳಗಿಳಿದ್ರೂ, ಪವರ್ ಪಾಯಿಂಟ್ ಆಗೋ ಲಕ್ಷಣಗಳು ಕಾಣುತ್ತಿವೆ. ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಮೂಲಕ ಶಾಸಕರು ಒತ್ತಡಕ್ಕೆ ಮುಂದಾಗ್ತಿದ್ದಾರೆ. ಆದರೆ ಪರಿಸ್ಥಿತಿ ಯಾಕೋ ನನ್ನ ಸುತ್ತ ಗಿರಿಕಿ ಹಾಕೋ ರೀತಿ ಇದೆ ಅನ್ನೋದನ್ನ ಸೂಕ್ಷ್ಮವಾಗಿ ಮನಗಂಡ ಮಾಜಿ ಸಿಎಂ ಯಡಿಯೂರಪ್ಪ, ನನ್ನನ್ನ ಪವರ್ ಸೆಂಟರ್ ಅಂತ ಬಿಂಬಿಸಬೇಡಿ. ಯಾರೂ ನನ್ನ ಭೇಟಿಗೆ ಬರಬೇಡಿ. ನನ್ನ ಭೇಟಿಯಾದ ನಂತರ ಸಚಿವ ಸ್ಥಾನದ ಬಗ್ಗೆ ಮಾತಾಡಬೇಡಿ. ಸುಖಾಸುಮ್ನೆ ನನ್ನ ಹೆಸರು ಎಳೆದು ತರಬೇಡಿ ಅಂತ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ವಲಸಿಗರ ಪರವಾಗಿ ನಿಂತಿರುವ ಯಡಿಯೂರಪ್ಪ ಸಚಿವ ಸ್ಥಾನದ ಅಭಯ ನೀಡಿದ್ದಾರೆ. ಸರ್ಕಾರ ರಚನೆಗೆ ಕಾರಣವಾಗಿರುವ ವಲಸಿಗರಿಗೆ ಸೂಕ್ತ ಸ್ಥಾನಮಾನ ನೀಡಲು ಬೊಮ್ಮಾಯಿ ಜೊತೆ ಚರ್ಚಿಸೋದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಿರಿಯರಿಗೆ ಅವಕಾಶ ನೀಡಲು ಶೆಟ್ಟರ್ ಸಂಪುಟ ತ್ಯಾಗ: ಬಿಎಸ್‍ವೈ

ಡಿಸಿಎಂ ಆಸೆ ಹೊರಹಾಕಿದ ಈಶ್ವರಪ್ಪ:
ಯುವ & ಕ್ರಿಯಾಶೀಲ ಕ್ಯಾಬಿನೆಟ್‍ಗಾಗಿ ಹಿರಿಯರಿಗೆ ಕೊಕ್ ಕೊಡ್ತಾರಾ ಅನ್ನೋ ಚರ್ಚೆ ಹೊತ್ತಲ್ಲೇ ಹಿರಿಯ ನಾಯಕ ಈಶ್ವರಪ್ಪ ಅವರು ಡಿಸಿಎಂ ಸ್ಥಾನದ ಆಸೆ ಹೊರ ಹಾಕಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿ, ಮೂರ್ನಾಲ್ಕು ದಿನಗಳಲ್ಲಿ ಅಚ್ಚರಿಯ ಬೆಳವಣಿಗೆಗಳಾಗಿವೆ. ಸರ್ಕಾರ ಮತ್ತು ಪಕ್ಷದಲ್ಲಿದ್ದ ಗೊಂದಲಗಳು ಪೂರ್ಣ ನಿವಾರಣೆ ಆಗಿದೆ. ನಾನು ಉಪಮುಖ್ಯಮಂತ್ರಿ ಆಗಬೇಕೆಂದು ಪ್ರಮುಖರು, ಸ್ವಾಮೀಜಿಗಳು ಒತ್ತಾಯಿಸಿದ್ದಾರೆ. ಶೆಟ್ಟರ್ ರೀತಿ ನಾನು ಸಚಿವ ಸ್ಥಾನ ಬೇಡ ಅನ್ನಲ್ಲ. ರಾಮನ ರಾಜಕಾರಣ, ಕೃಷ್ಣನ ತಂತ್ರಗಾರಿಕೆ ಗೊತ್ತಿದೆ. ಎಲ್ಲದಕ್ಕೂ ನಾನು ರೆಡಿ ಅಂತ ಈಶ್ವರಪ್ಪ ಹೇಳಿದ್ದಾರೆ. ಇದನ್ನೂ ಓದಿ: ನಾನು ಬಿಜೆಪಿ ಶಿಸ್ತಿನ ಸಿಪಾಯಿ, ಡಿಸಿಎಂ ಸ್ಥಾನಕ್ಕೆ ಲಾಬಿ ಮಾಡಲ್ಲ: ರಾಮುಲು

ಈಶ್ವರಪ್ಪ ಪರ ಹಾಲುಮತ ಸಮುದಾಯದ ಸ್ವಾಮೀಜಿಗಳು ನಿಂತಿದ್ದಾರೆ. ಇನ್ನು ಸಚಿವ ಸ್ಥಾನ ಬೇಡ ಅಂದಿರೋ ಜಗದೀಶ್ ಶೆಟ್ಟರ್ ಗೆ ಮನವೊಲಿಕೆ ನಡೆದಿದೆ. ಆದರೆ ಸ್ವಾಭಿಮಾನ, ಗೌರವದಿಂದ ನಿರ್ಧಾರ ಮಾಡಿದ್ದೇನೆ. ಯಾರೇ ಸಿಎಂ ಆದರೂ ಸಚಿವ ಆಗಲಾರೆ ಅಂತ ಪಕ್ಷದ ನಾಯಕರಿಗೆ ಮೊದಲೇ ತಿಳಿಸಿದ್ದೆ ಅಂತ ಶೆಟ್ಟರ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಆರ್‍ಎಸ್‍ಎಸ್ ನಾಯಕರ ಭೇಟಿ ಬಳಿಕವೂ ಇದನ್ನೇ ಪುನರುಚ್ಚರಿಸಿದ್ದಾರೆ. ಶ್ರೀರಾಮುಲು ಮಾತಾಡಿ, ನನಗೆ ಯಾವುದೇ ಮುನಿಸಿಲ್ಲ. ಡಿಸಿಎಂ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಲ್ಲ ಅಂದಿದ್ದಾರೆ. ಇದನ್ನೂ ಓದಿ: RSS ಮುಖಂಡ ಮುಕುಂದ್ ಜೊತೆ ಬಿಎಸ್‍ವೈ ಚರ್ಚೆ

Share This Article
Leave a Comment

Leave a Reply

Your email address will not be published. Required fields are marked *