ಓರ್ವನ ಕೊಲೆಗೆ 100 ಜನ ಬಂದ್ರು- ಸಿಸಿಟಿವಿಯಲ್ಲಿ ದೃಶ್ಯ ಸೆರೆ

Public TV
2 Min Read

– ನೂರರಲ್ಲಿ 10 ಆರೋಪಿಗಳ ಬಂಧನ
– ಕೈಯಲ್ಲಿ ಮಚ್ಚು, ದೊಣ್ಣೆ, ಲಾಂಗು, ಕಲ್ಲು, ಇಟ್ಟಿಗೆ

ಮುಂಬೈ/ಪುಣೆ: ಓರ್ವನ ಕೊಲೆಗೆ ನೂರು ಜನ ಬಂದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ದುಷ್ಕರ್ಮಿಗಳು ಸಾಲು ಸಾಲು ಬೈಕುಗಳಲ್ಲಿ ಹೋಗುತ್ತಿರೋದನ್ನ ವೀಡಿಯೋದಲ್ಲಿ ಗಮನಿಸಬಹುದು. ಯುವಕನ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಸ್ಥಳದಲ್ಲಿದ್ದ 10 ವಾಹನಗಳನ್ನು ಜಖಂಗೊಳಿಸಿದ್ದಾರೆ.

ಮಹಾರಾಷ್ಟ್ರದ ಪುಣೆಯ ನೆಹರೂ ನಗರದಲ್ಲಿ ಶುಕ್ರವಾರ ರಾತ್ರಿ 9.30ಕ್ಕೆ ಈ ಘಟನೆ ನಡೆದಿದೆ. 35 ವರ್ಷದ ನೀಲೇಶ್ ಸುಭಾಷ್ ಜಾಧವ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸುಭಾಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಆಶೀಷ್ ಜಗಧನೆ (31), ಇರ್ಫಾನ್ ಶೇಖ್ (30), ಜೀತೇಶ್ ಮಂಜುಲೆ (28), ಜಾವೇದ್ ಔಟಿ (29), ಆಕಾಶ್ ಹಜಾರೆ (30) ಸೇರಿದಂತೆ ನೂರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಂದು ಬಿಡಿ, ಹೊಡೆದಾಕಿ: ಹಲ್ಲೆಗೊಳಗಾದ ನೀಲೇಶ್ ನೆಹರೂ ನಗರದಲ್ಲಿ ಕೆಲಸ ಮಾಡಿಕೊಂಡಿದ್ದನು. ಶುಕ್ರವಾರ ರಾತ್ರಿ 9.30ಕ್ಕೆ ಕಾರಿನಲ್ಲಿರಿಸಿದ್ದ ಲ್ಯಾಪ್‍ಟಾಪ್ ತೆಗೆದುಕೊಳ್ಳಲು ನೀಲೇಶ್ ಕಚೇರಿಯಿಂದ ಹೊರ ಬಂದ ವೇಳೆ ದಾಳಿ ನಡೆದಿದೆ. ಬೈಕು ಗಳಲ್ಲಿ ಬಂದ ನೂರು ಜನರ ಗ್ಯಾಂಗ್ ನೀಲೇಶ್ ನನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಮಚ್ಚು, ಲಾಂಗು, ದೊಣ್ಣೆ, ಕಲ್ಲು, ಇಟ್ಟಿಗೆ ಸೇರಿದಂತೆ ಮಾರಕಾಸ್ತ್ರಗಳನ್ನ ತಮ್ಮ ಜೊತೆಯಲ್ಲಿ ತಂದಿದ್ದರು. ಹಲ್ಲೆ ವೇಳೆ ಆರೋಪಿಗಳು, ಇವನನ್ನ ಕೊಂದು ಬಿಡಿ, ಹೊಡೆದಾಕಿ ಎಂದು ಜೋರು ಜೋರಾಗಿ ಕೂಗಿದ್ದಾರೆ ಎಂದು ಪಿಂಪ್ರಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.

ನೀಲೇಶ್ ಮೇಲೆ ಎರಡರಿಂದ ಮೂರು ಬಾರಿ ಲಾಂಗುಗಳಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಲು ಗ್ಯಾಂಗ್ ಸೇರುತ್ತಿದ್ದಂತೆ ಎಚ್ಚೆತ್ತ ನೀಲೇಶ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳು ಹಲ್ಲೆಯ ಬಳಿಕ ಬೈಕುಗಳಲ್ಲಿ ತಿರುಗಾಡಿ ಸ್ಥಳೀಯರನ್ನ ಹೆದರಿಸಿದ್ದಾರೆ. ಪೊಲೀಸರು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರ ನೀಲೇಶ್ ಕುಟುಂಬಸ್ಥರು ಮತ್ತು ಆಪ್ತರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *