ಓಡಿ ಹೋಗಿ ಮದ್ವೆಯಾದ ನಂತ್ರ ದೂರವಾದ ಜೋಡಿ – 6 ತಿಂಗಳಲ್ಲೇ ಯುವಕ ಶವವಾಗಿ ಪತ್ತೆ

Public TV
2 Min Read

– ಸಂಬಂಧಿ ಯುವತಿಯ ಜೊತೆ ಪ್ರೀತಿ, ವಿವಾಹ
– ಭರವಸೆ ನೀಡಿ ದೂರ ಮಾಡಿದ್ದ ಹುಡುಗಿಯ ತಂದೆ

ಚೆನ್ನೈ: ಹುಡುಗಿ ಮನೆಯವರ ವಿರುದ್ಧವಾಗಿ ಆರು ತಿಂಗಳ ಹಿಂದೆ ಓಡಿ ಹೋಗಿ ಮದುವೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ತಮಿಳುನಾಡಿದ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ.

ವಿಜಿ (24) ಕೊಲೆಯಾಗಿರುವ ಯುವಕ. ಧರ್ಮಪುರಿ ಜಿಲ್ಲೆಯಲ್ಲಿ ಶನಿವಾರ ಈತನ ಮೃತದೇಹ ಪತ್ತೆಯಾಗಿದೆ. ಯುವಕನ ಕುತ್ತಿಗೆ ಮತ್ತು ತಲೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ. ವಿಜಿ ಆರು ತಿಂಗಳ ಹಿಂದೆ ತನ್ನ ಸಂಬಂಧಿಯೇ ಆಗಿದ್ದ ಯುವತಿಯನ್ನು ಆಕೆಯ ಪೋಷಕರ ವಿರುದ್ಧವಾಗಿ ಮದುವೆಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಒಟ್ಟಾರ್ತಿನೈ ಮೂಲದ ವಿಜಿ ಅದೇ ಗ್ರಾಮದ ಸಂಬಂಧಿಯಾಗಿದ್ದ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ ಯುವತಿಯ ಕುಟುಂಬದವರು ಮೊದಲಿನಿಂದಲೂ ಇವರ ಸಂಬಂಧಕ್ಕೆ ವಿರುದ್ಧ ವ್ಯಕ್ತಪಡಿಸುತ್ತಿದ್ದರು. ಆದ್ದರಿಂದ ಆರು ತಿಂಗಳ ಹಿಂದೆ ಈ ಜೋಡಿ ಓಡಿ ಹೋಗಿದ್ದು, ಯುವತಿಯ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರು. ವಿವಾಹವಾದ ನಂತರ ನವದಂಪತಿ ತಮ್ಮ ಗ್ರಾಮಕ್ಕೆ ಮರಳಿ ಹಿಂದಿರುಗಿದ್ದಾರೆ.

ಯುವತಿಯ ತಂದೆ ಮುರಳಿ ರಾಜ್, ಇನ್ನು ಆರು ತಿಂಗಳಲ್ಲಿ ನಿಮ್ಮಿಬ್ಬರ ವಿವಾಹ ಕಾರ್ಯಕ್ರಮವನ್ನು ನಡೆಸುವುದಾಗಿ ವಿಜಿಗೆ ಭರವಸೆ ನೀಡಿದ್ದನು. ಅಲ್ಲಿಯವರೆಗೆ ಮಗಳು ನಮ್ಮ ಮನೆಯಲ್ಲಿಯೇ ಇರಲಿ. ಈ ವೇಳೆ ಅವಳು ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಬೇಕು ಎಂದು ತಂದೆ ತಿಳಿಸಿದ್ದರು. ಆಗ ಇಬ್ಬರು ಇದಕ್ಕೆ ಸಮ್ಮತಿಸಿ ತಮ್ಮ ತಮ್ಮ ಮನೆಗಳಿಗೆ ಹೋಗಿದ್ದರು. ಇತ್ತೀಚೆಗೆ ಈ ಜೋಡಿ ಮತ್ತೊಮ್ಮೆ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದಾರೆ. ಆಗ ಮುರಳಿ ರಾಜ್ ಮುಂದಿನ ತಿಂಗಳು ವಿವಾಹವನ್ನು ನಡೆಸುವುದಾಗಿ ತಿಳಿಸಿದ್ದನು.

ಈ ಮಧ್ಯೆ ಶನಿವಾರ ಒಟ್ಟಾರ್ತಿನೈನಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಕುಮ್ಮಣ್ಣೂರು ರಸ್ತೆಯ ಬಳಿ ಯುವಕನ ಮೃತದೇಹ ಬಿದ್ದಿರುವುದನ್ನು ಸ್ಥಳೀಯರು ನೋಡಿದ್ದಾರೆ. ತಕ್ಷಣ ಪರಹನ್ಪಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ವಿಜಿಯ ಮೃತದೇಹವನ್ನು ಕುಮ್ಮಣ್ಣೂರಿನಲ್ಲಿ ಪತ್ತೆ ಮಾಡಲಾಗಿದೆ. ಯುವಕನ ಕುತ್ತಿಗೆಯಲ್ಲಿ ಹಗ್ಗದ ಗುರುತು ಇರುವುದು ಪತ್ತೆಯಾಗಿದೆ. ಅಲ್ಲದೇ ಆತನ ತಲೆಯ ಹಿಂಭಾಗದಲ್ಲಿ ತೀವ್ರವಾಗಿ ಗಾಯವಾಗಿದೆ. ಯುವತಿಯ ತಂದೆ ತಮ್ಮ ಮಗನನ್ನು ಕೊಲೆ ಮಾಡಿದ್ದಾನೆ ಎಂದು ವಿಜಿಯ ಕುಟುಂಬದವರು ಆರೋಪಿಸಿದ್ದಾರೆ. ಆದ್ದರಿಂದ ವಿಜಿಯ ತಂದೆ ಮುರಳಿ ರಾಜ್ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ವಿಶ್ವನಾಥನ್ ತಿಳಿಸಿದ್ದಾರೆ.

ಸದ್ಯಕ್ಕೆ ಈ ಕುರಿತು ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪರಹನ್ಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇತ್ತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *