ಒಲಿಂಪಿಕ್ಸ್ ಡೋಪಿಂಗ್ ಪರೀಕ್ಷೆ- 18 ಅಥ್ಲೀಟ್ಸ್ ಅನರ್ಹ

Public TV
1 Min Read

ಟೋಕಿಯೋ: ಜಪಾನ್‍ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಡೋಪಿಂಗ್ ಪರೀಕ್ಷೆಯಲ್ಲಿ 18 ಅಥ್ಲೀಟ್ಸ್ ಗಳು ಅನರ್ಹರಾಗಿದ್ದಾರೆ. ಈಗಾಗಲೇ ಪದಕ ಜಯಿಸಿದವರು ಕೂಡ ಡೋಪಿಂಗ್ ಪರೀಕ್ಷೆಯಲ್ಲಿ ಅನರ್ಹರಾದ ಬಗ್ಗೆ ವರದಿಯಾಗಿದೆ.

ಪ್ರಮುಖವಾಗಿ ಸ್ವಿಸ್ ಓಟಗಾರ ಅಲೆಕ್ಸ್ ವಿಲ್ಸನ್ ಅನರ್ಹವಾಗಿರುವ ಬಗ್ಗೆ ವರದಿಯಾಗಿದ್ದು, ಅಲೆಕ್ಸ್ ವಿಲ್ಸನ್ ಮೂಲತಃ ಜಮೈಕಾದವರಾಗಿದ್ದು ಪ್ರಸ್ತುತ ಸ್ವಿಸ್ ಪರವಾಗಿ ವೇಗದ ಓಟದ ವಿಭಾಗದಲ್ಲಿ ಪ್ರತಿನಿದಿಸುತ್ತಿದ್ದರು. ಆದರೆ ಇದೀಗ ಒಲಿಂಪಿಕ್ಸ್ ಸಮಿತಿ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿ ಕೂಟದಿಂದ ಹೊರ ಬಿದ್ದಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್ ಕ್ರೀಡಾಪಟುಗಳು ಗೆದ್ದ ಪದಕವನ್ನು ಕಚ್ಚಲು ಇದು ಅಸಲಿ ಕಾರಣ!

ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾರತದ ಪರ ಪದಕ ಭರವಸೆ ಮೂಡಿಸಿದ್ದ ಮಹಿಳಾ ಬಾಕ್ಸರ್ ಮೇರಿ ಕೋಮ್ ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಹೊರ ಬಿದ್ದಿದ್ದಾರೆ. 51 ಕೆಜಿ ವಿಭಾಗದಲ್ಲಿ ಕೊಲಂಬಿಯಾದ ಇಂಗ್ರಿಟ್ ವೆಲೆನ್ಸಿಯಾ ವಿರುದ್ಧ 16 ಸುತ್ತು ಸೆಣಸಿ, 2-3 ಅಂತರದಲ್ಲಿ ಸೋಲನ್ನಪ್ಪಿದ್ದಾರೆ. ಇನ್ನುಳಿದಂತೆ ಪುರುಷರ ಹಾಕಿ ತಂಡ ಅರ್ಜೇಂಟೀನಾ ವಿರುದ್ಧ 3-1 ಗೋಲ್‍ಗಳಿಂದ ಜಯಿಸಿ ಕ್ವಾರ್ಟರ್ ಫೈನಲ್‍ಗೆ ಲಗ್ಗೆ ಇಟ್ಟಿದೆ. ಆದರೆ, ಮಹಿಳೆಯರ ತಂಡ ಬ್ರಿಟನ್ ವಿರುದ್ಧ 1-4 ಗೋಲ್‍ಗಳಿಂದ ಸೋಲಪ್ಪಿ ನಿರಾಸೆ ಅನುಭವಿಸಿದೆ.

ಬ್ಯಾಡ್ಮಿಂಟನ್‍ನಲ್ಲಿ ಪಿವಿ ಸಿಂಧೂ, 91 ಕೆಜಿ ವಿಭಾಗದ ಬಾಕ್ಸಿಂಗ್‍ನಲ್ಲಿ ಸತೀಶ್‍ಕುಮಾರ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಶೂಟಿಂಗ್‍ನಲ್ಲಿ ಮನು ಬಾಕರ್, ಆರ್ಚರಿಯಲ್ಲಿ ಅತನುದಾಸ್ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದು, ಭಾರತಕ್ಕೆ ಪದಕ ಭರವಸೆ ಮೂಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *