ಒಬ್ಬನಿಂದ್ಲೇ 25 ಮಂದಿಗೆ ಕೊರೊನಾ ಸೋಂಕು- ಇಡೀ ಗ್ರಾಮ ಸೀಲ್‍ಡೌನ್

Public TV
1 Min Read

-130ಕ್ಕೂ ಹೆಚ್ಚು ಮಂದಿಯ ಸಂಪರ್ಕದಲ್ಲಿದ್ದ ಸೋಂಕಿತ

ಧಾರವಾಡ: ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಕೊರೊನಾ ಸ್ಫೋಟವಾಗಿದ್ದು, ಒಂದೇ ದಿನ 34 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 23 ಜನ ಸೋಂಕಿತರು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ಮೊರಬ ಗ್ರಾಮಕ್ಕೆ ದೆಹಲಿಯಿಂದ ವಾಪಸ್ಸಾಗಿದ್ದ ಮಹಿಳೆ (ರೋಗಿ-6522)ಯಿಂದ ತಂದೆ (ರೋಗಿ-6222)ಗೆ ಸೋಂಕು ತಗುಲಿತ್ತು. ಈಗ ರೋಗಿ-6222 ಸೂಪರ್ ಸ್ಪೈಡರ್ ಆಗಿದ್ದು, ಒಬ್ಬನಿಂದಲೇ ಒಟ್ಟು 25 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ ದುರದೃಷ್ವವಶಾತ್ ಆಸ್ಪತ್ರೆ ಸೇರಿದ ಮರು ದಿನವೇ 65 ವರ್ಷದ ವೃದ್ಧ (ರೋಗಿ-7060) ಮೃತಪಟ್ಟಿದ್ದಾನೆ.

ರೋಗಿ-6222 ಎಲ್ಲಿಯೂ ಹೋಗಿರಲಿಲ್ಲ. ದೆಹಲಿಯಿಂದ ಆಗಮಿಸಿದ್ದ ಮಗಳು (ರೋಗಿ-6522) ಆಗಮಿಸಿದ್ದರೂ ಮೊದಲು ಈಕೆಗೆ ಸೋಂಕು ದೃಢವಾಗಿರಲಿಲ್ಲ. ಮೊದಲು ತಂದೆಯಲ್ಲಿಯೇ ಸೋಂಕು ಕಂಡಿತ್ತು. ಆ ಬಳಿಕ ಮಗಳನ್ನ ಪರೀಕ್ಷೆಗೆ ಒಳಪಡಿಸಿದಾಗ ಇವಳಲ್ಲಿಯೂ ಸೋಂಕು ಕಂಡಿತ್ತು. ಆರಂಭದಲ್ಲಿ ರೊಗಿ-6222ದಿಂದ ಪತ್ನಿ ಮತ್ತು ಮಗನಿಗೆ ಮಾತ್ರ ಸೋಂಕು ಕಂಡುಬಂದಿತ್ತು.

ಇಂದು ಇಡೀ ಮೊರಬ ಗ್ರಾಮವೇ ತಲ್ಲಣಿಸುವಂತೆ ಈತನಿಂದ ಒಂದೇ ದಿನ 23 ಜನರಿಗೆ ಸೋಂಕು ದೃಢಪಟ್ಟಿದೆ. ಮಗಳು ಮನೆಗೆ ಬಂದ ಬಳಿಕ ಈತ ಎಂದಿನಂತೆ ಮೂರು ದಿನಗಳ ಕಾಲ ಊರಲ್ಲಿ ಓಡಾಡಿದ್ದ. ಅದೇ ಕಾರಣಕ್ಕೆ ಈಗ ಇಷ್ಟು ಜನರಿಗೆ ಸೋಂಕು ತಗುಲಿದ್ದು, 12 ಜನ 50 ವರ್ಷ ಮೇಲ್ಪಟ್ಟವರೇ ಎಂದು ಆಘಾತಕಾರಿ ಸಂಗತಿ.

ಧಾರವಾಡ ಜಿಲ್ಲೆಯಲ್ಲಿ ಇಲ್ಲಿವರೆಗೂ ಅವಳಿ ನಗರ ಬಿಟ್ಟರೆ ಗ್ರಾಮೀಣ ಪ್ರದೇಶಕ್ಕೆ ಸೋಂಕು ಹೋಗಿರಲಿಲ್ಲ. ಆದರೆ ಇದೀಗ ಇಡೀ ಗ್ರಾಮಕ್ಕೆ ಗ್ರಾಮವೇ ಕೊರೊನಾದಿಂದ ತತ್ತರಿಸಿ ಹೋಗಿದ್ದು, ಗ್ರಾಮವನ್ನ ಸೀಲ್‍ಡೌನ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *