– ಮನೆ ಮುಂದೆಯೇ ಯುವತಿಯ ಕಿಡ್ನ್ಯಾಪ್
ಪಾಟ್ನಾ: ಮನೆಯ ಮುಂದೆ ಹಾಕಿದ್ದ ಒಣಗಿದ ಬಟ್ಟೆಗಳನ್ನ ತೆಗೆದುಕೊಳ್ಳುತ್ತಿದ್ದ ಯುವತಿಯನ್ನ ಅಪಹರಿಸಿ ಅತ್ಯಾಚಾರಗೈದಿರುವ ಘಟನೆ ಬಿಹಾರದ ಮುಝಫರ್ ಪುರ ಜಿಲ್ಲೆಯ ಕಾಂಟಿಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ಮನೆಯಂಗಳದಲ್ಲಿಯ ಬಟ್ಟೆ ಒಳಗೆ ತರಲು ತಾಯಿ ಹೇಳಿದ್ದರು. ಮನೆಯ ಅನತಿ ದೂರದಲ್ಲಿದ್ದಾಗಲೇ ದುಷ್ಕರ್ಮಿಗಳು ಯುವತಿಯ ಬಾಯಿ ಮುಚ್ಚಿ ಅಪಹರಿಸಿದ್ದಾರೆ. ಬಟ್ಟೆ ತರಲು ಹೋದ ಮಗಳು ಒಳಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಮನೆಯ ಆಸುಪಾಸು ಎಲ್ಲಿಯೂ ಕಾಣಿಸಿಕೊಳ್ಳದಿದ್ದಾಗ ಗ್ರಾಮಸ್ಥರೆಲ್ಲ ಹುಡುಕಾಡಿದ್ದಾರೆ.
ಇಂದು ಬೆಳಗ್ಗೆ ಗ್ರಾಮದ ಹೊರವಲಯದ ಕೊಚ್ಚೆ ಗುಂಡಿ ಬಳಿ ಅರೆಪ್ರಜ್ಞೆ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದಾಳೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಯುವತಿಯನ್ನ ಮನೆಗೆ ಕರೆ ತಂದಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯನ್ನ ಆಸ್ಪತ್ರೆಗೆ ರವಾನಿಸಿದ್ದು, ಘಟನೆ ಸಂಬಂಧ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹೊರಗೆ ಹಾಕಿರುವ ಬಟ್ಟೆ ಒಳಗೆ ತರಲು ಮಗಳಿಗೆ ಹೇಳಿದೆ. ಆಕೆಯ ತಂದೆ ಬಂದು ಮಗಳು ಎಲ್ಲಿ ಎಂದು ಕೇಳಿದಾಗ ಹೊರಗೆ ಇರಲಿಲ್ಲ. ಕೊನೆಗೆ ಎಲ್ಲರೂ ಹುಡುಕಾಡಿದ್ರು ಸಿಗಲಿಲ್ಲ. ಬೆಳಗ್ಗೆ ಕೊಚ್ಚೆ ಗುಂಡಿ ಬಳಿ ಮಗಳು ಸಿಕ್ಕಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ತಾಯಿ ಆರೋಪಿಸಿದ್ದಾರೆ.