ಕೊಪ್ಪಳ: ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇಲ್ಲದಂತಾಗಿದ್ದು, ಒಂದೇ ಬಸ್‍ನಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಬಸ್ ವ್ಯವಸ್ಥೆ ಇಲ್ಲದ್ದಕ್ಕೆ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕೊರೊನಾ ಆತಂಕದ ಬಳಿಕ ಇದೀಗ ಶಾಲಾ, ಕಾಲೇಜುಗಳು ಆರಂಭವಾಗಿವೆ. ಈ ಹಿನ್ನಲೆಯಲ್ಲಿ ತಾಲೂಕಿನ ವನಬಳ್ಳಾರಿಯಿಂದ ಕೊಪ್ಪಳಕ್ಕೆ ಬರುವ ಬಸ್ ನಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಬಸ್ ಟಾಪ್ ಮೇಲೆ ಹತ್ತಿ ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ವನಬಳ್ಳಾರಿಯಿಂದ ಗಬ್ಬೂರು, ಕಲ್ಲತಾವರಗೇರಾ ಹಾಲಳ್ಳಿ, ಬಸಾಪುರ, ಕಿಡದಾಳ ಸೇರಿದಂತೆ 6 ಗ್ರಾಮಗಳ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿನಿತ್ಯ ಒಂದೇ ಬಸ್ ನಲ್ಲಿ ಬರುತ್ತಿದ್ದಾರೆ. ಕುರಿ ಹಿಂಡು ತುಂಬಿದಂತೆ ಬಸ್ ನಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದು, ಬಸ್ ಒಳಗಡೆ ಸ್ಥಳ ಇಲ್ಲದೆ ಟಾಪ್ ಮೇಲೆ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳುತ್ತಿದ್ದಾರೆ. ಹೆಚ್ಚಿನ ಬಸ್ ಬಿಡುವಂತೆ ಸಾರಿಗೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಸಾರಿಗೆ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ವಿದ್ಯಾರ್ಥಿಗಳು ಬಸ್ ಟಾಪ್ ಮೇಲೆ ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳುತ್ತಾರೆ. ಸ್ವಲ್ಪ ಆಯತಪ್ಪಿದರೂ ಜೀವ ಹಾನಿ ಗ್ಯಾರಂಟಿಯಾಗಿದೆ. ಇನ್ನಾದರೂ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೇತ್ತು ವಿದ್ಯಾರ್ಥಿಗಳ ಬಸ್ ಸಮಸ್ಯೆ ಬಗೆಹರಿಸಬೇಕಿದೆ.