ಒಂದೇ ತಿಂಗಳಲ್ಲಿ 8 ಬಾರಿ ಕಚ್ಚಿದ ಹಾವು- ಭಯದಲ್ಲೇ ಬದುಕುತ್ತಿರುವ ಯುವಕ

Public TV
1 Min Read

– ಬೇರೆ ಊರಿಗೆ ಹೋದರೂ ಬಿಡದ ನಾಗ
– ಪೂಜೆ, ಪುನಸ್ಕಾರ ಮಾಡಿದರೂ ಪ್ರಯೋಜನವಾಗಿಲ್ಲ

ಲಕ್ನೋ: ಹಾವು ಪದೇ ಪದೇ ಯುವಕನನ್ನು ಗುರಿಯಾಗಿಸಿರುವ ಆಘಾತಕಾರಿ ಘಟನೆ ನಡೆದಿದ್ದು, ಒಂದು ತಿಂಗಳಲ್ಲಿ ಅದೇ ಹಾವು ಯುವಕನಿಗೆ ಬರೋಬ್ಬರಿ 8 ಬಾರಿ ಕಚ್ಚಿದೆ. ಇದರಿಂದಾಗಿ ಯುವಕ ಮನೆಯಿಂದ ಹೊರ ಬರಲು ಸಹ ಭಯಪಡುತ್ತಿದ್ದಾನೆ.

ಉತ್ತರ ಪ್ರದೇಶದ ಪಾಂಪುರದಲ್ಲಿ ಘಟನೆ ನಡೆದಿದ್ದು, ಕೇವಲ ಒಂದೇ ತಿಂಗಳಲ್ಲಿ ಅದೇ ಹಾವು 8 ಬಾರಿ ಯುವಕನಿಗೆ ಕಚ್ಚಿದೆ. 8 ಬಾರಿ ಸಹ ಯುವಕ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ. 17 ವರ್ಷದ ಯಶ್‍ರಾಜ್ ಮಿಶ್ರಾ ಹಾವು ಕಡಿತದಿಂದಾಗಿ ಈ ವರೆಗೆ ಹಲವು ಬಾರಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ವಾರದ ಹಿಂದಷ್ಟೇ ಆತನಿಗೆ ಕೊನೇಯದಾಗಿ ಹಾವು ಕಚ್ಚಿದೆ. ಅಲ್ಲದೆ ಇದರಿಂದಾಗಿ ಬಾಲಕನ ಕುಟುಂಬಸ್ಥರು ಉರಗ ತಜ್ಞರ ಸಹಾಯವನ್ನು ಸಹ ಕೋರಿದ್ದಾರೆ.

ಮಗನಿಗೆ ಮೂರನೇ ಬಾರಿ ಹಾವು ಕಚ್ಚಿದ ಬಳಿಕ ಆತನನ್ನು ಬಹದ್ದೂರ್‍ನಲ್ಲಿರುವ ನಮ್ಮ ಸಂಬಂಧಿಕ ರಾಮ್‍ಜೀ ಶುಕ್ಲಾ ಅವರ ಮನೆಗೆ ಕಳುಹಿಸಿದೆವು. ಅಲ್ಲಿಗೆ ಕಳುಹಿಸಿದ ಕೆಲವೇ ದಿನಗಳ ಬಳಿಕ ಮತ್ತೆ ಅದೇ ಹಾವು ಮನೆಯ ಬಳಿ ಕಾಣಿಸಿಕೊಂಡಿದ್ದು, ಮತ್ತೆ ಕಚ್ಚಿದೆ. ನಂತರ ಯಶ್‍ರಾಜ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ ಎಂದು ಯಶ್‍ರಾಜ್ ತಂದೆ ಚಂದ್ರಮೌಳಿ ಮಿಶ್ರಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 25ರಂದು ಕೊನೇಯ ಬಾರಿ ಹಾವು ಕಚ್ಚಿದ್ದು, ನಂತರ ಊರಲ್ಲಿದ್ದ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದೆವು. ಮಾತ್ರವಲ್ಲದೆ ಉರಗ ತಜ್ಞರು ನೀಡಿದ ಸಲಹೆ ಮೇರೆಗೆ ವಿವಿಧ ಥೇರಪಿಗಳನ್ನೂ ಮಾಡಿಸಿದ್ದೇವೆ ಎಂದು ಮಿಶ್ರಾ ತಿಳಿಸಿದ್ದಾರೆ.

ಆ ಹಾವು ಯಶ್‍ರಾಜ್‍ನನ್ನು ಯಾಕೆ ಅಷ್ಟೊಂದು ಟಾರ್ಗೆಟ್ ಮಾಡುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಯುವಕ ಇದೀಗ ಭಯದಲ್ಲೇ ಬದುಕುತ್ತಿದ್ದು, ಮಾನಸಿಕ ಅಸ್ವಸ್ಥನಾಗಿದ್ದಾನೆ. ಹಾವಿಗೆ ಹೆದರಿಕೊಂಡು ಹೊರಗೆ ಬರುತ್ತಿಲ್ಲ. ಈ ಬಗ್ಗೆ ಹಲವು ಪೂಜೆಗಳನ್ನೂ ನಾವು ಮಾಡಿಸಿದ್ದೇವೆ. ಅಲ್ಲದೆ ಹಾವನ್ನು ಹಿಡಿಯಲು ಉರಗ ತಜ್ಞರ ಮೂಲಕ ಹಲವು ಪ್ರಯತ್ನಗಳನ್ನು ಮಾಡಿದ್ದೇವೆ. ಎಲ್ಲವೂ ನಿರರ್ಥಕವಾಗಿವೆ ಎಂದು ಯಶ್‍ರಾಜ್ ತಂದೆ ಅಳಲು ತೋಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *