ಒಂದು ದೇಶ – ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ಅಡ್ಡಿ

Public TV
2 Min Read

– ಇದು ಆರ್‌ಎಸ್‍ಎಸ್ ಅಜೆಂಡಾ ಎಂದ ಕೈ ನಾಯಕರು
– ಜನ ಕ್ಷಮಿಸಲ್ಲ ಎಂದು ಸಿಎಂ ಗರಂ

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ನಡುವೆ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದೆ. ಮೊದಲ ದಿನವಾದ ಇಂದು ಒಂದು ದೇಶ ಒಂದು ಚುನಾವಣೆ ಕುರಿತ ವಿಶೇಷ ಚರ್ಚೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಮಾಡಿಕೊಟ್ಟರು.

ಸ್ಪೀಕರ್‌ ಅವಕಾಶ ನೀಡಿದ್ದಕ್ಕೆ ವಿಪಕ್ಷ ನಾಯಕ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಪರಿಗಣಿಸದ ಸ್ಪೀಕರ್, ಗದ್ದಲದ ನಡುವೆಯೇ ವಿಷಯ ಚರ್ಚೆಯ ಪ್ರಸ್ತಾವನೆ ಓದಿದರು. ಇದರಿಂದ ಗರಂ ಆದ ಸಿದ್ದರಾಮಯ್ಯ ಇದು ಆರ್‌ಎಸ್‍ಎಸ್ ಅಜೆಂಡಾ, ಮೋದಿ ಡಿಕ್ಟೇಟರ್ ಎಂದು ಆರೋಪಿಸಿದರು.

ಕಾಂಗ್ರೆಸ್ ಸದಸ್ಯರೆಲ್ಲಾ ಸದನದ ಬಾವಿಗಿಳಿದು ಪ್ರತಿಭಟಿಸಿದಕ್ಕೆ ಸ್ಪೀಕರ್ ಕಿಡಿಕಾರಿದರು. ಚರ್ಚೆಗೆ ಒಪ್ಪಿಕೊಂಡು ಬೇಡ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದರು. ಕಾಂಗ್ರೆಸ್‍ನವರ ಮೇಲೆ ಸಿಟ್ಟಾದ ಸಿಎಂ ವಿಪಕ್ಷಗಳಿಗೆ ಯಾವುದರಲ್ಲೂ ವಿಶ್ವಾಸವಿಲ್ಲ. ಇಷ್ಟೊಂದು ಪ್ರತಿಭಟನೆ ಯಾಕೆ ಮಾಡ್ತೀರಿ? ಇದು ನಾಚಿಕೆಗೇಡಿನ ಸಂಗತಿ. ರಾಜ್ಯದ ಜನತೆ ನಿಮ್ಮನ್ನು ಕ್ಷಮಿಸಲ್ಲ ಅಂತಾ ವಾಗ್ದಾಳಿ ನಡೆಸಿದರು.

ಗೃಹ ಮಂತ್ರಿ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್ ದಬ್ಬಾಳಿಕೆ ಇಲ್ಲಿ ನಡೆಯುವುದಿಲ್ಲ. ಇಲ್ಲಿ ಕ್ರಿಯಾಲೋಪ ಆಗಿಲ್ಲ. ನಿಮ್ಮ ಪ್ರತಿಭಟನೆ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು. ಆದರೆ ಗದ್ದಲ ನಿಲ್ಲದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಮುಂದೂಡಿದರು. ಮಧ್ಯಾಹ್ನದ ನಂತರವೂ ಇದೇ ಗಲಾಟೆ ಮುಂದುವರೆದಿತ್ತು.

 

ಇದಕ್ಕೂ ಮುನ್ನ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿಯ ಪೊಲಿಟಿಕಲ್ ಅಜೆಂಡಾ ಹೇರುವ ಯತ್ನ ನಡೆಯತ್ತಿದೆ. ಸದನದಲ್ಲಿ ಲಿಮಿಟ್ ಆಗಿ ಮಾತಾಡಬೇಕು ಆಂತ ಕಾರ್ಯದರ್ಶಿ ಹತ್ತಿರ ಸ್ಪೀಕರ್ ಪತ್ರ ಕಳಿಸಿದ್ದಾರೆ ಎಂದು ಕಿಡಿಕಾರಿದರು.

ಏನಿದು ಒನ್ ನೇಷನ್ ಒನ್ ಎಲೆಕ್ಷನ್ ?
ದೇಶದಲ್ಲಿ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದೇ ಒಂದು ದೇಶ ಒಂದು ಚುನಾವಣೆಯ ತಿರುಳು. ಎಲ್ಲಾ ಚುನಾವಣೆಗಳಿಗೂ ಒಂದೇ ಮತಪಟ್ಟಿ ಇರುವ ಕಾರಣ ಚುನಾವಣಾ ವೆಚ್ಚ ತಗ್ಗುತ್ತದೆ. ಇದರಿಂದ ದೇಶಕ್ಕೆ ಒಳಿತು ಎಂಬ ಅಭಿಪ್ರಾಯವಿದೆ.

ಯೋಜನೆಗಳ ಘೋಷಣೆಗೆ ನೀತಿಸಂಹಿತೆ ಅವಕಾಶ ನೀಡುವುದಿಲ್ಲ. ಒಂದೊಂದು ಚುನಾವಣೆ ನಡೆದಾಗ ಯೋಜನೆ ಜಾರಿಗೆ ಅಡ್ಡಿಯಾಗುತ್ತದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚ ಕೂಡ ಕಡಿಮೆ ಆಗಲಿದೆ. ಒಂದೇ ಬಾರಿ ಚುನಾವಣೆಯಿಂದ ಮಾನವ ಶ್ರಮ, ಸಮಯ ಉಳಿತಾಯವಾಗುತ್ತದೆ.

ಬಿಜೆಪಿ ಪ್ರಣಾಳಿಕೆಯಲ್ಲಿ ಒಂದು ದೇಶ-ಒಂದು ಚುನಾವಣೆ ವಿಷಯ ಪ್ರಸ್ತಾಪವಾಗಿದೆ. ಅಮೆರಿಕ, ಸ್ವೀಡನ್, ದಕ್ಷಿಣ ಆಫ್ರಿಕಾ, ಜರ್ಮನಿ, ಸ್ಪೇನ್ ಸೇರಿದಂತೆ ಹಲವು ದೇಶಗಳಲ್ಲಿ ಒಂದು ದೇಶ-ಒಂದು ಚುನಾವಣೆ ಜಾರಿಯಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *