ಒಂದು ದಿನದ ಸಿಎಂ ಆಗಲಿದ್ದಾಳೆ ಪದವಿ ವಿದ್ಯಾರ್ಥಿನಿ

Public TV
1 Min Read

– ಎಲ್ಲ ಇಲಾಖೆಯ ಪ್ರಗತಿ ಪರಿಶೀಲನೆ

ಡೆಹ್ರಾಡೂನ್: ಕೃಷಿಯಲ್ಲಿ ಪದವಿ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಒಂದು ದಿನದ ಮಟ್ಟಿಗೆ ಉತ್ತರಾಖಂಡ್‍ನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾಳೆ. ಜನವರಿ 24 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಸರ್ಕಾರ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಹರಿದ್ವಾರ ಮೂಲದ ಯುವತಿ ಸೃಷ್ಟಿ ಗೋಸ್ವಾಮಿ ಒಂದು ದಿನದ ಮಟ್ಟಿಗೆ ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ. ಉತ್ತರಾಖಂಡ್‍ನ ಬೇಸಿಗೆ ರಾಜಧಾನಿ ಗೇರ್ಸೈನ್ ನಿಂದ ಯುವತಿ ಆಡಳಿತ ನಡೆಸಲಿದ್ದಾರೆ. ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ.

ಅಟಲ್ ಆಯುಷ್ಮಾನ್, ಸ್ಮಾರ್ಟ್ ಸಿಟಿ, ಪ್ರವಾಸೋದ್ಯಮ ಇಲಾಖೆಯ ಹೋಮ್‍ಸ್ಟೇ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಸಿಎಂ ಕಚೇರಿಗೆ ಪ್ರವೇಶಿಸುವುದಕ್ಕೂ ಮುನ್ನ ಉತ್ತರಾಖಂಡ್ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಐದು ನಿಮಿಷಗಳ ಕಾಲ ಯೋಜನೆಗಳ ಬಗ್ಗೆ ಯುವತಿಗೆ ಪ್ರೆಸೆಂಟೇಶನ್ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ಎಲ್ಲ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಬಗ್ಗೆ ಉತ್ತರಾಖಂಡ್‍ನ ಮಕ್ಕಳ ಹಕ್ಕುಗಳ ರಕ್ಷಣಾ ಆಯುಕ್ತಾಲಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯುಕ್ತಾಲಯದ ಅಧ್ಯಕ್ಷೆ ಉಷಾ ನೇಗಿ ಈ ಕುರಿತು ಮಾಹಿತಿ ನೀಡಿದ್ದು, ಮಧ್ಯಾಹ್ನ 12ರಿಂದ 3 ಗಂಟೆ ವರೆಗೆ ವಿಧಾನಸಭೆಯ ಕಟ್ಟಡದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ. ಚೈಲ್ಡ್ ಅಸೆಂಬ್ಲಿಯನ್ನು ಸಹ ನಡೆಸಲಾಗುತ್ತಿದೆ ಎಂದು ನೇಗಿ ಮಾಹಿತಿ ನೀಡಿದ್ದಾರೆ.

ಸೃಷ್ಟಿ ಗೋಸ್ವಾಮಿ ಯಾರು?
ಉತ್ತರಾಖಂಡ್ ಬಾಲ ವಿಧಾನಸಭೆಯ ಮುಖ್ಯಮಂತ್ರಿಯಾಗುತ್ತಿರುವ ಸೃಷ್ಟಿ ಗೋಸ್ವಾಮಿ ಹರಿದ್ವಾರ ಜಿಲ್ಲೆಯ ದೌಲತ್‍ಪುರ ನಿವಾಸಿಯಾಗಿದ್ದು, ಇವರ ತಂದೆ ಪ್ರವೀಣ್ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಇವರ ತಾಯಿ ಸುಧಾ ಗೋಸ್ವಾಮಿ ಗೃಹಣಿಯಾಗಿದ್ದಾರೆ. ಸೃಷ್ಟಿ ರೂರ್ಕೆಯ ಬಿಎಸ್‍ಎಂ ಪಿಜಿ ಕಾಲೇಜಿನಲ್ಲಿ ಕೃಷಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, 7ನೇ ಸೆಮಿಸ್ಟರ್‍ನಲ್ಲಿ ಓದುತ್ತಿದ್ದಾಳೆ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮೇ, 2018ರಲ್ಲಿ ಸಹ ಉತ್ತರಾಖಂಡ್‍ನ ಬಾಲ ವಿಧಾನಸಭೆಯ ಮುಖ್ಯಮಂತ್ರಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *