ನವದೆಹಲಿ: ವಾಹನದಲ್ಲಿ ವ್ಯಕ್ತಿಯೊಬ್ಬರೆ ಪ್ರಯಾಣಿಸುವಾಗ ಮಾಸ್ಕ್ ಧರಿಸಬೇಕೆಂದು ಜನರಿಗೆ ಯಾವುದೇ ಮಾರ್ಗಸೂಚಿಯನ್ನು ಹೊರಡಿಸಿಲ್ಲ ಎಂದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದೆಹಲಿ ಹೈಕೋರ್ಟ್‍ಗೆ ತಿಳಿಸಿದೆ.
2020ರ ಸೆಪ್ಟೆಂಬರ್ 9 ರಂದು ಕೆಲಸಕ್ಕೆಂದು ಕಾರಿನಲ್ಲಿ ಒಂಟಿಯಾಗಿ ಹೋಗುತ್ತಿದ್ದ ವಕೀಲ ಸೌರಭ್ ಶರ್ಮಾ ಎಂಬವರನ್ನು ದೆಹಲಿ ಪೊಲೀಸರು ತಡೆದು ಮಾಸ್ಕ್ ಧರಿಸದೇ ಇದ್ದ ಕಾರಣ 500 ರೂ ದಂಡ ವಿಧಿಸಿದ್ದರು.
ಈ ವಿಚಾರವಾಗಿ ಸೌರಭ್ ಶರ್ಮಾ ತಾನು ಪಾವತಿಸಿದ 500 ರೂ ದಂಡವನ್ನು ಮರುಪಾವತಿಸಲು ಹಾಗೂ ಸಾರ್ವಜನಿಕ ಸ್ಥಳದಲ್ಲಿ ತನಗೆ ಕಿರುಕುಳ ನೀಡಿದ್ದಕ್ಕಾಗಿ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ದೆಹಲಿ ಸಂಕ್ರಾಮಿಕ ರೋಗಗಳ ನಿಯಂತ್ರಣದ ಮಾರ್ಗಸೂಚಿ ಉಲ್ಲಂಘಿಸಿದರೆ ಮೊದಲ ಬಾರಿಗೆ 500 ರೂ. ಮತ್ತು ಪದೇ ಪದೇ ಮಾರ್ಗಸೂಚಿ ಉಲ್ಲಂಘಿಸಿದರೆ 1,000 ರೂ ದಂಡ ವಿಧಿಸಲಾಗುತ್ತದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ವಿಚಾರ ದೆಹಲಿ ಸರ್ಕಾರಕ್ಕೆ ಸಂಬಂಧಿಸಿದೆ. ಖಾಸಗಿ ವಾಹನಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವಂತೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಆರೋಗ್ಯ ಸಚಿವಾಲಯ ನ್ಯಾಯಾಲಯಕ್ಕೆ ತಿಳಿಸಿದೆ.