ಐಪಿಎಲ್ ರದ್ದು ಬಿಸಿಸಿಐಗೆ 2000 ಕೋಟಿ ನಷ್ಟ

Public TV
2 Min Read

ಮುಂಬೈ: 14ನೇ ಆವೃತ್ತಿಯ ಐಪಿಎಲ್ ಕೊರೊನಾ ಕಾಟದಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರಿಂದಾಗಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ 2000 ಕೋಟಿ ರೂ. ನಷ್ಟ ಸಂಭವಿಸಿದೆ.

ಐಪಿಎಲ್‍ನಲ್ಲಿ ಆಡುತ್ತಿದ್ದ ಆಟಗಾರರಿಗೆ ಮತ್ತು ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್‍ನ್ನು ಮೂಂದೂಡಿಕೆ ಮಾಡಿದೆ. ಈಗಾಗಲೇ ನಿಗದಿಯಾಗಿದ್ದ ಒಟ್ಟು 60 ಪಂದ್ಯಗಳು ನಡೆಯಬೇಕಿತ್ತು ಆದರೆ ಇದೀಗ 29 ಪಂದ್ಯಗಳು ನಡೆದು ಅರ್ಧದಲ್ಲೇ ಸ್ಥಗಿತಗೊಂಡಿದೆ. ಇದರಿಂದಾಗಿ ಬಿಸಿಸಿಐ ಪ್ರಸಾರದ ಹಕ್ಕು, ಶೀರ್ಷಿಕೆ ಪ್ರಾಯೋಜಕತ್ವ ಸೇರಿದಂತೆ ಹಲವು ವಿಭಾಗಗಳಿಂದ ಬರಬೇಕಿದ್ದ 2 ಸಾವಿರ ಕೋಟಿ ರೂ.ಗೂ ಅಧಿಕ ಆದಾಯಕ್ಕೆ ಬ್ರೇಕ್ ಬಿದ್ದಿದೆ.

ನಾವು ಈ ಬಾರಿಯ ಐಪಿಎಲ್ ಅರ್ಧದಲ್ಲೇ ಸ್ಥಗಿತಗೊಂಡಿರುವುದರಿಂದಾಗಿ 2000 ಕೋಟಿಯಿಂದ 2500 ಕೋಟಿ ರೂ.ವರೆಗೆ ನಷ್ಟ ಅನುಭವಿಸಲಿದ್ದೇವೆ. ನನ್ನ ಲೆಕ್ಕಾಚಾರದ ಪ್ರಕಾರ 2200 ಕೋಟಿ ರೂ. ನಷ್ಟ ಅನುಭವಿಸಿದ್ದೇವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಒಟ್ಟು 52 ದಿನಗಳ ಕಾಲ 60 ಪಂದ್ಯಗಳು ನಡೆಯಬೇಕಿತ್ತು ಇದರಲ್ಲಿ ಈಗಾಗಲೇ 29 ಪಂದ್ಯಗಳು ಪೂರ್ಣಗೊಂಡು ಮುಂದಿನ ಪಂದ್ಯಗಳನ್ನು ಮುಂದೂಡಲಾಗಿದೆ. ಇದರಿಂದ ಅತಿಹೆಚ್ಚಿನ ನಷ್ಟ ಪ್ರಸಾರದ ಹಕ್ಕಿನಿಂದ ಬಿಸಿಸಿಐಗೆ ಆಗಿದೆ. ಖಾಸಗಿ ವಾಹಿನಿ 3,269.4 ಕೋಟಿ ರೂ. ನೀಡಿ ಒಂದು ವರ್ಷದ ಪ್ರಸಾರದ ಹಕ್ಕನ್ನು ಪಡೆದುಕೊಂಡಿತ್ತು. ಇದರಿಂದ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ ಅಂದಾಜು 54.5 ಕೋಟಿ ರೂಪಾಯಿ ಸಿಗುತ್ತಿತ್ತು. ಆದರೆ ಇದೀಗ ಕೇವಲ 29 ಪಂದ್ಯಗಳು ನಡೆದಿರುವುದರಿಂದಾಗಿ 1580 ಕೋಟಿ ರೂ. ಬಿಸಿಸಿಐಗೆ ಸಿಗಲಿದೆ. ಇನ್ನುಳಿದ 1690 ಕೋಟಿ ರೂ. ನಷ್ಟವಾಗುವ ಸಾಧ್ಯತೆಗಳಿವೆ.

ಇದರೊಂದಿಗೆ ಶೀರ್ಷಿಕೆ ಪ್ರಯೋಜಕತ್ವ ಪಡೆದಿದ್ದ ಮೊಬೈಲ್ ಕಂಪನಿ ವರ್ಷಕ್ಕೆ 440 ಕೋಟಿ ರೂ. ಬಿಸಿಸಿಐಗೆ ಕೊಡುತ್ತಿತ್ತು. ಆದರೆ ಇದೀಗ ಇದರ ಅರ್ಧದಷ್ಟು ಹಣವನ್ನು ಮಾತ್ರ ನೀಡುವ ನೀರಿಕ್ಷೆ ಇದೆ. ಹಾಗೆ ಸಹಪ್ರಯೋಜಕತ್ವವನ್ನು ಪಡೆದುಕೊಂಡಿದ್ದ ಕಂಪನಿಗಳು ಕೂಡ ಅರ್ಧ ಹಣವನ್ನು ಮಾತ್ರ ಬಿಸಿಸಿಐಗೆ ಕೊಡುವ ಲೆಕ್ಕಾಚಾರ ಹಾಕಿಕೊಂಡಿದೆ. ಇದರಿಂದಾಗಿ ಬಿಸಿಸಿಐಗೆ ಹೆಚ್ಚಿನ ನಷ್ಟವಾಗುವ ಭೀತಿ ಎದುರಾಗಿದೆ.

ಕೊರೊನಾದಿಂದಾಗಿ ಅರ್ಧದಲ್ಲೇ ಐಪಿಎಲ್ ಸ್ಥಗಿತಗೊಂಡ ಕಾರಣ ಬಿಸಿಸಿಐಗೆ ಹಣದ ನಷ್ಟ ಉಂಟಾದರೆ ಕ್ರಿಕೆಟ್ ಅಭಿಮಾನಿಗಳಿ ಆಟದ ಮನರಂಜನೆ ನಷ್ಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *