ಐಪಿಎಲ್ ರದ್ದಾದ್ರೆ ಬಿಸಿಸಿಐಗೆ ಅಂದಾಜು 4,000 ಕೋಟಿ ರೂ. ನಷ್ಟ!

Public TV
2 Min Read

ಮುಂಬೈ: ಕೊರೊನಾ ವೈರಸ್ ಕಾರಣದಿಂದ ವಿಶ್ವ ಕ್ರೀಡಾಲೋಕ ತತ್ತರಿಸಿದೆ. ಹಲವು ಪ್ರತಿಷ್ಠಿತ ಟೂರ್ನಿಗಳು ಕೊರೊನಾದಿಂದ ರದ್ದಾಗಿದ್ದು, ಮತ್ತಷ್ಟು ಟೂರ್ನಿಗಳನ್ನು ಮುಂದೂಡಲಾಗಿದೆ. ಇತ್ತ 2020ರ ಐಪಿಎಲ್ ಟೂರ್ನಿ ಕೂಡ ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಆದರೆ ಮತ್ತೆ ಲಾಕ್‍ಡೌನ್ ಮುಂದುವರಿಸಿದ ಕಾರಣ ಬಿಸಿಸಿಐ ಮುಂದಿನ ಆದೇಶದವರೆಗೂ ಐಪಿಎಲ್ ಮುಂದೂಡಿತ್ತು. ಆದರೆ ಇದುವರೆಗೂ ಐಪಿಎಲ್ ಆರಂಭವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಮತ್ತೆ 2020ರ ಐಪಿಎಲ್ ಶೆಡ್ಯೂಲ್ ಮುಂದೂಡಲು ಬಿಸಿಸಿಐ ಚಿಂತನೆ ನಡೆಸಲು ಮುಂದಾದರೆ ಟಿ20 ವಿಶ್ವಕಪ್, ಏಷ್ಯಾಕಪ್, ಆಸ್ಟ್ರೇಲಿಯಾ ಟೂರ್ನಿಗಳಿಗೆ ಸಮಸ್ಯೆ ಎದುರಾಗುತ್ತದೆ. ಈಗಾಗಲೇ ಪಿಸಿಬಿ ಕೂಡ ಏಷ್ಯಾ ಕಪ್ ಶೆಡ್ಯೂಲ್ ಅನ್ವಯ ನಡೆಯಲಿದೆ ಎಂದು ಹೇಳಿದೆ. ಪರಿಣಾಮ ಐಪಿಎಲ್ ಟೂರ್ನಿ ನಡೆಯುವುದು ಅನುಮಾನ ಎಂಬ ಚರ್ಚೆ ಆರಂಭವಾಗಿದೆ. ಒಂದೊಮ್ಮೆ ಐಪಿಎಲ್ ಟೂರ್ನಿ ರದ್ದಾದರೆ ಅಂದಾಜು 4,000 ಸಾವಿರ ಕೋಟಿ ರೂ. ನಷ್ಟ ಎದುರಾಗಲಿದೆ ಎಂದು ಬಿಸಿಸಿಐ ಬೋರ್ಡ್ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ.

ಐಪಿಎಲ್ ರದ್ದಾದರೆ ಬಿಸಿಸಿಐಗೆ ಭಾರೀ ಪ್ರಮಾಣದಲ್ಲಿ ನಷ್ಟ ಎದುರಾಗಲಿದೆ. ನನ್ನ ಅಂದಾಜಿನ ಪ್ರಕಾರ ಸುಮಾರು 4 ಸಾವಿರ ಕೋಟಿ ರೂ. ನಷ್ಟ ಆಗಲಿದೆ. ಈ ಮೊತ್ತ ಹೆಚ್ಚಾಗುವ ಅವಕಾಶ ಕೂಡ ಇದೆ. ಸದ್ಯದ ಸಂದರ್ಭದಲ್ಲಿ ಐಪಿಎಲ್ ನಡೆಯುವ ಕುರಿತು ಯಾವುದೇ ಸ್ಪಷ್ಟ ಮಾಹಿತಿ ನೀಡಲಾಗುವುದಿಲ್ಲ. ಕೊರೊನಾ ಸ್ಥಿತಿ ಕುರಿತು ನಿರಂತರವಾಗಿ ಚರ್ಚೆ ನಡೆಸಲಾಗುತ್ತಿದೆ. ಐಪಿಎಲ್ ನಡೆಯುವಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದು ಅರುಣ್ ಧುಮಾಲ್ ವಿವರಿಸಿದ್ದಾರೆ.

ಐಪಿಎಲ್ ರದ್ದಾದರೆ ಟೂರ್ನಿಯ ಪ್ರಸಾರದ ಹಕ್ಕಗಳನ್ನು ಖರೀದಿ ಮಾಡಿರುವ ಸ್ಟಾರ್ ಇಂಡಿಯಾ ಸಹ ಭಾರೀ ನಷ್ಟ ಎದುರಿಸುವ ಸಾಧ್ಯತೆ ಇದೆ. ಆದರೆ ಖಾಲಿ ಕ್ರೀಡಾಂಗಣದಲ್ಲಿ ಆದರೂ ಐಪಿಎಲ್ ನಡೆಸುವಂತೆ ಕೆಲ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತ ಶ್ರೀಲಂಕಾ, ಯುಎಇ ಕೂಡ ಐಪಿಎಲ್ ಆವೃತ್ತಿಗೆ ಆತಿಥ್ಯ ನೀಡಲು ಸಿದ್ಧ ಎಂದು ಹೇಳಿವೆ. ಆದರೆ ಸದ್ಯದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪೂರ್ಣ ಪ್ರಮಾಣದ ಅನುಮತಿ ಇಲ್ಲದ ಪರಿಣಾಮ ಇದರ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಧುಮಾಲ್ ಹೇಳಿದ್ದಾರೆ.

2008ರಲ್ಲಿ ಆರಂಭವಾಗಿದ್ದ ಐಪಿಎಲ್ ಕಳೆದ 12 ಆವೃತ್ತಿಗಳಲ್ಲಿ ಬಿಸಿಸಿಐಗೆ ಭಾರೀ ಆದಾಯವನ್ನು ತಂದುಕೊಟ್ಟಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೂ ಕೂಡ ಶಾಕ್ ನೀಡುವ ಹಂತಕ್ಕೆ ಬಿಸಿಸಿಐ ಆರ್ಥಿಕವಾಗಿ ಬೆಳೆದಿದೆ. ಐಪಿಎಲ್‍ಗೆ ಪೈಪೋಟಿ ನೀಡಲು ಸಾಕಷ್ಟು ಟೂರ್ನಿಗಳು ಆರಂಭವಾದರೂ ಅಷ್ಟು ಯಶಸ್ವಿಯಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *