ಐಪಿಎಲ್‍ನಿಂದ ಧೋನಿ ನಿವೃತ್ತಿ?- ಮುನ್ಸೂಚನೆಗಳಿವೆ ಎಂದ ಫ್ಯಾನ್ಸ್

Public TV
2 Min Read

ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡದ ಆಟಗಾರರಾದ ಹಾರ್ಧಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ತಮ್ಮ ಜರ್ಸಿಯನ್ನು ಗಿಫ್ಟ್ ನೀಡಿದ್ದು, ಈ ಕುರಿತ ಫೋಟೋವನ್ನು ಐಪಿಎಲ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

39 ವರ್ಷದ ಎಂಎಸ್ ಧೋನಿ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಜಾಸ್ ಬಟ್ಲರ್ ಅವರಿಗೆ ತಮ್ಮ ಜರ್ಸಿಯನ್ನು ಗಿಫ್ಟ್ ನೀಡಿದ್ದರು. ಇದು ಧೋನಿ ಐಪಿಎಲ್‍ನಲ್ಲಿ ಆಡಿದ 200ನೇ ಪಂದ್ಯವಾಗಿತ್ತು. ಆದ್ದರಿಂದ ಅಭಿಮಾನಿಗಳು ಹೆಚ್ಚು ಗಮನ ನೀಡಿರಲಿಲ್ಲ. ಆದರೆ ಪಾಂಡ್ಯ ಬ್ರದರ್ಸ್ ಸೇರಿದಂತೆ ಹಲವು ಆಟಗಾರರಿಗೆ ಧೋನಿ ಪಂದ್ಯದ ಬಳಿಕ ತಮ್ಮ ಜರ್ಸಿಯನ್ನು ಗಿಫ್ಟ್ ನೀಡುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಹಲವರು ಇದು ಐಪಿಎಲ್‍ನಿಂದ ಧೋನಿ ನಿವೃತ್ತಿಯ ಮುನ್ಸೂಚನೆ ಎಂದು ಹೇಳಿದ್ದಾರೆ.

ಐಪಿಎಲ್ 2020ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿರುವ 11 ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಜಯಗಳಿಸಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂಬೈ ಪಂದ್ಯದ ಸೋಲಿನ ಬಳಿಕ ಮಾತನಾಡಿದ್ದ ಧೋನಿ, ಯುವ ಆಟಗಾರರಿಗೆ ತಂಡದಲ್ಲಿ ಹೆಚ್ಚಿನ ಅವಕಾಶ ನೀಡಲಾಗುವುದು. ಸೋಲಿನ ಕಾರಣದಿಂದ ನಾಯಕತ್ವದ ಜವಾಬ್ದಾರಿಯಿಂದ ದೂರ ಸರಿಯಲು ಸಾಧ್ಯವಿಲ್ಲ. ಮುಂದಿನ ಪಂದ್ಯಗಳಲ್ಲೂ ತಂಡವನ್ನು ಮುನ್ನಡೆಸುತ್ತೇನೆ ಎಂದು ಹೇಳಿದ್ದರು.

ಈ ಹಿಂದೆ ಯಾರು ಊಹೆ ಮಾಡದ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಧೋನಿ ನಿವೃತ್ತಿ ಘೋಷಿಸಿದ್ದರು. ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದ ಧೋನಿ, ಐಪಿಎಲ್‍ನಲ್ಲಿ ಮಾತ್ರ ಮುಂದುವರಿದಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಧೋನಿ ಇತರೇ ಆಟಗಾರರಿಗೆ ತಮ್ಮ ಜರ್ಸಿಯನ್ನು ಗಿಫ್ಟ್ ನೀಡುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *