ಐಪಿಎಲ್‍ನಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಹೊರಹಾಕಿದ್ದಕ್ಕೆ ಬಿಸಿಸಿಐಗೆ 4,800 ಕೋಟಿ ದಂಡ

Public TV
2 Min Read

– ಬಿಸಿಸಿಐ ಮಾಡಿದ ಎಡವಟ್ಟೇನು?

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಯಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಹೊರಹಾಕಿದ್ದಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಈಗ 4800 ಕೋಟಿ ದಂಡ ಕಟ್ಟುವ ಪರಿಸ್ಥಿತಿ ಎದುರಾಗಿದೆ.

2012ರಲ್ಲಿ ಐಪಿಎಲ್ ತಂಡದಿಂದ ಬಿಸಿಸಿಐ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಕೈಬಿಟ್ಟಿತ್ತು. ಐಪಿಎಲ್ ನಿಯಮಾವಳಿಗಳನ್ನು ಡೆಕ್ಕನ್ ಚಾರ್ಜರ್ಸ್ ತಂಡ ಉಲ್ಲಂಘನೆ ಮಾಡಿದೆ ಎಂದು ಬಿಸಿಸಿಐ ಐಪಿಎಲ್‍ನಲ್ಲಿ ಒಂದು ಬಾರಿ ಚಾಂಪಿಯನ್ ಆಗಿದ್ದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಅಮಾನತು ಮಾಡಿತ್ತು. ಇದನ್ನು ಪ್ರಶ್ನಿಸಿ ತಂಡದ ಫ್ರಾಂಚೈಸಿ ಕೋರ್ಟ್ ಮೊರೆ ಹೋಗಿತ್ತು.

ವರದಿಯ ಪ್ರಕಾರ ಐಪಿಎಲ್‍ನಲ್ಲಿ ಮುಂದುವರೆಯಲು ಡೆಕ್ಕನ್ ಚಾರ್ಜರ್ಸ್ ತಂಡ ಬಿಸಿಸಿಐಗೆ 100 ಕೋಟಿ ಹಿಂದಿರುಗಿಸಲಾಗದ ಹಣವನ್ನು ಕಟ್ಟಬೇಕಿತ್ತು. ಆದರೆ ಬಿಸಿಸಿಐ ನೀಡಿದ ಅವದಿಯೊಳಗೆ ಫ್ರಾಂಚೈಸಿ ಹಣವನ್ನು ಕಟ್ಟುವಲ್ಲಿ ವಿಫಲವಾಗಿತ್ತು. ಇದರಿಂದ ಬಿಸಿಸಿಐ ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ ಶೋಕಾಸ್ ನೋಟಿಸ್ ನೀಡಿ, 30 ದಿನದ ಒಳಗೆ ಈ ಹಣವನ್ನು ಕಟ್ಟುವಂತೆ ತಂಡಕ್ಕೆ ಗಡುವು ನೀಡಿತ್ತು. ಆದರೆ ಅವದಿ ಮುಗಿಯಲು ಇನ್ನೂ ಒಂದು ದಿನ ಬಾಕಿ ಇರುವಾಗಲೇ 29 ದಿನಕ್ಕೆ ಸಭೆ ಮಾಡಿದ್ದ ಬಿಸಿಸಿಐ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಐಪಿಎಲ್‍ನಿಂದ ಹೊರ ಹಾಕಿತ್ತು. ಜೊತೆಗೆ ದಂಡನ್ನು ವಿಧಿಸಿತ್ತು.

ನಮ್ಮ ಕಕ್ಷೀದಾರರಾದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದವನ್ನು ಹಣ ಕಟ್ಟಲು ನೀಡಿದ ಅವದಿ ಮುಗಿಯು ಮುನ್ನವೇ ಟೂರ್ನಿಯಿಂದ ಅಮಾನತು ಮಾಡಲಾಗಿದೆ. ಇದರಿಂದ ನಮ್ಮ ತಂಡಕ್ಕೆ ಬಹಳ ಆರ್ಥಿಕ ನಷ್ಟವಾಗಿದೆ. ಈ ನಷ್ಟವನ್ನು ನಮ್ಮ ಮಾಲೀಕರಿಗೆ ಬಿಸಿಸಿಐ ಬಡ್ಡಿ ಸಮೇತ ತುಂಬಿಕೊಂಡಬೇಕು ಎಂದು ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಪರ ವಕೀಲರಾದ ಧೀರ್ ಅಂಡ್ ಧೀರ್ ಅಸೋಸಿಯೇಟ್ಸ್ ಸಂಸ್ಥೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ಪ್ರಕರಣವನ್ನು ವಿಚಾರಣೆ ಮಾಡಲು ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿಕೆ ಠಾಕೂರ್ ಅವರನ್ನು ಮಧ್ಯಸ್ಥಿಕೆ ನ್ಯಾಯಮೂರ್ತಿಗಳಾಗಿ ನೇಮಿಸಿತ್ತು. ಈ ಮಧ್ಯೆ ಡೆಕ್ಕನ್ ಚಾರ್ಜರ್ಸ್ ತಂಡ ನಮಗೆ 6,046 ಕೋಟಿ ರೂಗಳ ನಷ್ಟವಾಗಿದ್ದು, ಅದನ್ನು ಬಡ್ಡಿ ಸಮೇತ ವಾಪಸ್ ಕೋಡಿಸಬೇಕು ಎಂದು ಕೋರ್ಟಿಗೆ ಮನವಿ ಮಾಡಿತ್ತು. ಜೊತೆಗೆ ಬಿಸಿಸಿಐ ನೀಡಿದ್ದ 30 ದಿನದ ಅವದಿಯ ಕೊನೆಯ ದಿನ ನಮ್ಮ ಕಕ್ಷೀದಾರರು ಬಿಸಿಸಿಐ ಹೇಳಿದ್ದ ಹಣವನ್ನು ಕಟ್ಟಲು ಸಿದ್ಧವಿದ್ದರು ಎಂದು ಫ್ರಾಂಚೈಸಿ ಪರ ವಕೀಲರು ವಾದಿಸಿದ್ದರು.

ಈ ಪ್ರಕರಣದ ವಿಚಾರವಾಗಿ 2017ರಲ್ಲೇ ವಿಚಾರಣೆ ಮುಗಿಸಿದ್ದ ಬಾಂಬೆ ಹೈಕೋರ್ಟ್ ಇಂದು ತನ್ನ ತೀರ್ಪುನ್ನು ನೀಡಿದೆ. ಈ ತೀರ್ಪಿನ ಪ್ರಕಾರ ಬಿಸಿಸಿಐ ತಾನು ಕೊಟ್ಟಿದ್ದ 30 ದಿನದ ಕಾಲವಕಾಶವನ್ನು ತಂಡ ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಲು ಅವಕಾಶ ನೀಡಬೇಕಿತ್ತು. ಕೊಟ್ಟ ಅವದಿಗೂ ಮುನ್ನವೇ ತಂಡವನ್ನು ಅಮಾನತು ಮಾಡಿದ್ದು ತಪ್ಪು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಬಿಸಿಸಿಐ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಮಾಲೀಕರಿಗೆ ಆದ ನಷ್ಟವನ್ನು ಬಡ್ಡಿ ಸಮೇತ ತುಂಬಿ ಕೋಡಬೇಕು. ಜೊತೆಗೆ ವಿಚಾರಣೆಗಾಗಿ ತಂಡ ಖರ್ಚು ಮಾಡಿರುವ 50 ಲಕ್ಷ ರೂಗಳನ್ನು ಬಿಸಿಸಿಐ ಭರಿಸಬೇಕು ಎಂದು ಹೇಳಿದೆ.

ಈ ಪ್ರಕರಣದಲ್ಲಿ ಬಿಸಿಸಿಐಗೆ ಕೂಡ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಕೋರ್ಟ್ ನೀಡಿದೆ. ಆದರೆ ಇನ್ನು ಈ ಬಗ್ಗೆ ಬಿಸಿಸಿಐ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *