ಐಪಿಎಲ್‍ನಲ್ಲಿ ಸಾಫ್ಟ್ ಸಿಗ್ನಲ್ ನಿಯಮಕ್ಕೆ ಬ್ರೇಕ್ ಹಾಕಿದ ಬಿಸಿಸಿಐ

Public TV
2 Min Read

ಮುಂಬೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಚರ್ಚೆಗೆ ಕಾರಣವಾಗಿರುವ ಅಂಪೈರ್ ಸಾಫ್ಟ್ ಸಿಗ್ನಲ್ ನಿಯಮವನ್ನು ಈ ಬಾರಿ ನಡೆಯಲಿರುವ ಐಪಿಎಲ್ ನಿಂದ ತೆಗೆದುಹಾಕಲಾಗಿದೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಅಂಪೈರ್ ಸಾಫ್ಟ್ ಸಿಗ್ನಲ್ ನಿಯಮದ ಪ್ರಕಾರ ವಿವಾದಿತವಾಗಿ ಸೂರ್ಯಕುಮಾರ್ ಯಾದವ್ ಔಟ್ ಆಗಿದ್ದರು. ಈ ನಿರ್ಧಾರವನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಶ್ನಿಸಿ ಅಸಮಾಧಾನ ಹೊರ ಹಾಕಿದ್ದರು.

ಸಾಫ್ಟ್ ಸಿಗ್ನಲ್ ಕುರಿತು ವಿವಾದ ಕೇಳಿ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಸಿಸಿಐ ಈ ಬಾರಿ ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈ ನಿಯಮವನ್ನು ರದ್ದು ಮಾಡಿದೆ. ಈ ಕುರಿತು ಬಿಸಿಸಿಐ ಉನ್ನತ ಮೂಲಗಳು ತಿಳಿಸಿರುವ ಪ್ರಕಾರ, ಈ ಬಾರಿಯ ಐಪಿಎಲ್‍ನಲ್ಲಿ ಸಾಫ್ಟ್ ಸಿಗ್ನಲ್ ನಿಯಮವನ್ನು ತೆಗೆದು ಹಾಕಲಾಗಿದ್ದು, ಪಂದ್ಯದ ವೇಳೆ ಮೈದಾನದಲ್ಲಿ ಕಾರ್ಯನಿರ್ವಹಿಸುವ ಅಂಪೈರ್ ಯಾವುದೇ ನಿರ್ಧಾರದ ಕುರಿತು ಗೊಂದಲಗಳಿದ್ದರೆ ಮೂರನೇ ಅಂಪೈರ್‍ನೊಂದಿಗೆ ಚರ್ಚಿಸಿ ನಂತರ ತನ್ನ ನಿರ್ಧಾರವನ್ನು ಪ್ರಕಟಿಸಬಹುದೆಂದು ತಿಳಿಸಿದೆ.

ಏನಿದು ಸಾಫ್ಟ್ ಸಿಗ್ನಲ್?
ಮೈದಾನದ ಅಂಪೈರ್ ಅನುಮಾನಾಸ್ಪದವಾದ ಕ್ಯಾಚ್ ಅಥವಾ ಇತರ ಔಟ್ ನಿರ್ಧಾರ, ರನ್‍ಗಳ ನಿರ್ಧಾರವನ್ನು ತೆಗೆದುಕೊಳ್ಳಲು ಆಗದೆ ಇದ್ದಾಗ ಟಿವಿ ಅಂಪೈರ್ ಸಹಾಯವನ್ನು ಕೇಳುತ್ತಾರೆ. ಈ ವೇಳೆ ಟಿವಿ ಅಂಪೈರ್ ಮೈದಾನದ ಅಂಪೈರ್ ನಿರ್ಧಾರವನ್ನು ಕೇಳುತ್ತಾರೆ ಆಗ ಮೈದಾನದ ಅಂಪೈರ್ ಔಟ್ ಅಥವಾ ನಾಟ್‍ಔಟ್ ಎಂಬ ನಿರ್ಧಾರ ಪ್ರಕಟಿಸುತ್ತಾರೆ, ಇದು ಸಾಫ್ಟ್ ಸಿಗ್ನಲ್. ನಂತರ ಟಿವಿ ಅಂಪೈರ್ ಮರು ಪರೀಕ್ಷಿಸಿ ಸಾಕ್ಷಿಗಳು ಸರಿಯಾಗಿ ಗೊತ್ತಾಗದೆ ಇದ್ದರೆ ಮೈದಾನದ ಅಂಪೈರ್ ನಿರ್ಧಾರವನ್ನೇ ಎತ್ತಿ ಹಿಡಿಯುತ್ತಾರೆ.

ಐಪಿಎಲ್‍ನಂತಹ ದೊಡ್ಡ ಟೂರ್ನಿಗಳಲ್ಲಿ ಅಂಪೈರ್‍ಗಳಿಂದ ಆಗುವಂತಹ ತಪ್ಪುಗಳಿಂದ ತಂಡಗಳಿಗೆ ಸೋಲು ಗೆಲುವಿನಲ್ಲಿ ಬಹುದೊಡ್ಡ ಹೊಡೆತ ಬಿಳುತ್ತದೆ. ಹಾಗಾಗಿ ಆನ್-ಫೀಲ್ಡ್ ಅಂಪೈರ್ ಕೊಡುವ ನಿರ್ಧಾರವನ್ನು ಮೂರನೇ ಅಂಪೈರ್ ರದ್ದು ಪಡಿಸುವ ನಿರ್ಧಾರವನ್ನು ಈ ಬಾರಿಯ ಐಪಿಎಲ್‍ನಲ್ಲಿ ಅಳವಡಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.

ಕಳೆದ ಬಾರಿಯ ಐಪಿಎಲ್‍ನಲ್ಲಿ ಪಂಜಾಬ್ ಮತ್ತು ಡೆಲ್ಲಿ ತಂಡಗಳ ನಡುವಿನ ಪಂದ್ಯದಲ್ಲಿ ಅಂಪೈರ್ ನೀಡಿದ ಅಲ್ಪಾವಧಿ ನಿಯಮದಿಂದಾಗಿ ಎರಡು ತಂಡಗಳ ನಡುವೆ ಭಾರೀ ಚರ್ಚೆ ಉಂಟಾಗಿತ್ತು. ಪಂದ್ಯದ ಬಳಿಕ ಪಂಜಾಬ್ ತಂಡದ ಆಡಳಿತ ಮಂಡಳಿ, ಅಲ್ಪಾವಧಿ ನಿಯಮದ ವಿರುದ್ಧ ಐಪಿಎಲ್ ಆಡಳಿತ ಮಂಡಳಿಗೆ ದೂರು ನೀಡಿತ್ತು.

14ನೇ ಆವೃತ್ತಿಯ ಐಪಿಎಲ್ ಪಂದ್ಯಾಟಗಳು ಏಪ್ರಿಲ್ 9 ರಿಂದ ಮೇ 30ರ ವರೆಗೆ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್, ಕೋಲ್ಕತ್ತಾ ಹಾಗೂ ಮುಂಬೈ ನಗರಗಳಲ್ಲಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *