ಐಪಿಎಲ್‍ಗೆ ಕೊರೊನಾ ಕಾರ್ಮೋಡ – ಟೂರ್ನಿಯಿಂದ ಇಬ್ಬರು ಅಂಪೈರ್‍ ಗಳು ಔಟ್

Public TV
2 Min Read

ನವದೆಹಲಿ: ಕೊರೊನಾ ಎರಡನೇ ಅಲೆಯ ನಡುವೆ ನಡೆಯುತ್ತಿರುವ ಐಪಿಎಲ್ ಟೂರ್ನಿಗೆ ದಿನದಿಂದ ದಿನಕ್ಕೆ ಕಾರ್ಮೋಡ ಆವರಿಸುತ್ತಿದೆ. ಇದೀಗ ಇಬ್ಬರು ಅಂಪೈರ್‍ ಗಳು ಐಪಿಎಲ್‍ನಿಂದ ಅರ್ಧದಲ್ಲೇ ಹಿಂದೆ ಸರಿದಿದ್ದಾರೆ.

14ನೇ ಆವೃತ್ತಿ ಐಪಿಎಲ್ ಭಾರತದಲ್ಲಿ ನಡೆಯುತ್ತಿದೆ. ಆದರೆ ಇದೀಗ ಟೂರ್ನಿ ನಡೆಯುತ್ತಿದ್ದಂತೆ ಆರಂಭದಿಂದಲೇ ಕಾಟಕೊಡುತ್ತಿದ್ದ ಕೊರೊನಾ ತನ್ನ ವರಸೆಯನ್ನು ಬದಲಿಸಿ ಇದೀಗ ಆಟಗಾರರು, ಸಿಬ್ಬಂದಿಯೊಂದಿಗೆ ಅಂಪೈರ್ ಕೂಡ ಹಿಂದೆ ಸರಿಯುವಂತೆ ಮಾಡಿದೆ.

ಭಾರತ ಮೂಲದ ಅಂಪೈರ್ ನಿತಿನ್ ಮೆನನ್ ಮತ್ತು ಆಸ್ಟ್ರೇಲಿಯಾದ ಪಾಲ್ ರಿಫೇಲ್ ಐಪಿಎಲ್‍ನಲ್ಲಿ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇದೀಗ ವೈಯಕ್ತಿಕ ಕಾರಣದಿಂದಾಗಿ ಹಿಂದೆ ಸರಿಯುವುದಾಗಿ ಐಪಿಎಲ್ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದ್ದಾರೆ.

ಈ ಕುರಿತು ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಬಿಸಿಸಿಐನ ಹಿರಿಯ ಅಧಿಕಾರಿ, ನಿತಿನ್ ಮೆನನ್ ಅವರ ಹೆಂಡತಿ ಮತ್ತು ತಾಯಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಅವರು ಬಯೋ ಬಬಲ್ ತೊರೆದು ಐಪಿಎಲ್‍ನಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ. ಇವರೊಂದಿಗೆ ಆಸ್ಟ್ರೇಲಿಯಾದ ಅಂಪೈರ್ ಪೌಲ್ ರಿಫೇಲ್ ಕೂಡ ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ.

ಐಸಿಸಿ ಎಲೈಟ್ ಅಂಪೈರ್ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಅಂಪೈರ್ ಮೆನನ್ ಆಗಿದ್ದಾರೆ. ಈ ಹಿಂದೆ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಐಪಿಎಲ್‍ನಲ್ಲೂ ಅಂಪೈರ್ ಆಗಿ ಈ ವರೆಗಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇನ್ನು ಮುಂದಿನ ಪಂದ್ಯಗಳಿಂದ ಮೆನನ್ ಹೊರಗುಳಿಯಲು ನಿರ್ಧರಿಸಿದ್ದಾರೆ.

ಈಗಾಗಲೇ ಐಪಿಎಲ್‍ನಿಂದ ಡೆಲ್ಲಿ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್, ವೀಕ್ಷಕ ವಿವರಣೆಕಾರರಾಗಿದ್ದ ಆರ್.ಪಿ ಸಿಂಗ್ ಹೊರ ನಡೆದಿದ್ದಾರೆ. ಇದೀಗ ಮೆನನ್ ಹೊರಗುಳಿಯುದರೊಂದಿಗೆ ಐಪಿಎಲ್‍ನಿಂದ ಕೊರೊನಾ ಕಾರಣ ಹೇಳಿ 3 ಮಂದಿ ಭಾರತೀಯರು ಹೊರ ನಡೆದಂತಾಗಿದೆ.

ಕೆಲದಿನಗಳ ಹಿಂದೆ ಡೆಲ್ಲಿ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನನ್ನ ಕುಟುಂಬ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ. ಈ ಸಂಕಷ್ಟದಲ್ಲಿ ಅವರ ಜೊತೆ ನಾನಿರಬೇಕು ಹಾಗಾಗಿ ನಾನು ಐಪಿಎಲ್‍ನಿಂದ ಹಿಂದೆ ಸರಿಯುತ್ತಿದ್ದೇನೆ ಎಂದಿದ್ದರು.

ಈ ಹಿಂದೆ ಆಸ್ಟ್ರೇಲಿಯಾದ ಮೂರು ಜನ ಆಟಗಾರರು ಸ್ವದೇಶಕ್ಕೆ ಮರಳುವುದಾಗಿ ತೆರಳಿದ್ದಾರೆ. ಇದೀಗ ಆಸ್ಟ್ರೇಲಿಯಾದ ಅಂಪೈರ್ ಕೂಡ ಸ್ವದೇಶಕ್ಕೆ ಮರಳಲು ರೆಡಿಯಾಗಿದ್ದಾರೆ. ರಾಜಸ್ಥಾನ ತಂಡದ ಆಂಡ್ರ್ಯೂ ಟೈ, ಬೆಂಗಳೂರು ತಂಡದ ಕೇನ್ ರಿಚರ್ಡ್‍ಸನ್ ಮತ್ತು ಆಡಂ ಜಂಪಾ ಬಯೋ ಬಬಲ್‍ನಲ್ಲಿ ಇರಲಾಗದೆ ಭಾರತ ಬಿಟ್ಟು ಸ್ವದೇಶಕ್ಕೆ ತೆರಳಿದ್ದಾರೆ. ಇದೀಗ ಇನ್ನುಳಿದ ಕೆಲವು ಆಸ್ಟ್ರೇಲಿಯಾದ ಆಟಗಾರರು ಮರಳಿ ತಮ್ಮ ತಮ್ಮ ದೇಶಕ್ಕೆ ತೆರಳುವ ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್‍ನಲ್ಲಿ ಆಟಗಾರರು, ವೀಕ್ಷಕ ವಿವರಣೆಗಾರರು, ಮತ್ತು ಕೋಚ್‍ಗಳಾಗಿ ಆಸ್ಟ್ರೇಲಿಯಾದ 30 ಮಂದಿ ಐಪಿಎಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಎಲ್ಲಾ ಅಡೆತಡೆಗಳ ನಡುವೆ ಬಿಸಿಸಿಐ ಐಪಿಎಲ್‍ನ್ನು ಯಶಸ್ವಿಯಾಗಿ ಮುಗಿಸುವುದಾಗಿ ಭರವಸೆ ನೀಡಿದೆ. ಮುಂದಿನ ದಿನಗಳಲ್ಲಿ ಯಾವ ರೀತಿ ಪಂದ್ಯಗಳು ನಡೆಯಲಿದೆ ಎಂಬುದರ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *