ಬೀಜಿಂಗ್: ಕಳೆದ ಐದು ತಿಂಗಳ ಬಳಿಕ ಸೋಮವಾರ ಚೀನಾದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಕೇಸುಗಳು ಪತ್ತೆಯಾಗಿದೆ ಎಂದು ದೇಶದ ಆರೋಗ್ಯ ಪ್ರಾಧಿಕಾರ ಹೇಳಿದೆ.
ಚೀನಾದ ಬೀಜಿಂಗ್ ಪ್ರದೇಶ ಮತ್ತು ಹುಬೇ ಪ್ರಾಂತ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಚೀನಾದ ಈಶಾನ್ಯ ಪ್ರದೇಶಗಳಾದ ಹೀಲಾಂಗ್‍ಜಿಯಾಂಗ್ ಪ್ರದೇಶಗಳಲ್ಲಿ ಮತ್ತೆ ಕೊರೊನಾದಿಂದಾಗಿ ಲಾಕ್‍ಡೌನ್ ಹೇರಿರುವ ಕುರಿತು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಹುಬೇ ಪ್ರಾಂತ್ಯದಲ್ಲಿ 85 ಸ್ಥಳೀಯ ಪ್ರಕರಣಗಳು ದಾಖಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಲಿಯಾನಿಂಗ್ ಪ್ರಾಂತ್ಯದಲ್ಲಿ 2 ಹೊಸ ಪ್ರಕರಣ ಕಂಡುಬಂದರೆ ಬೀಜಿಂಗ್ ಪ್ರಾಂತ್ಯದಲ್ಲಿ 1 ಹೊಸ ಪ್ರಕರಣ ಕಂಡುಬಂದಿದೆ. ದೇಶದಲ್ಲಿ ಒಟ್ಟು 18 ಪ್ರಕರಣ ಇತರ ದೇಶದಿಂದ ಬಂದವರಲ್ಲಿ ವರದಿಯಾಗಿದೆ.
ಒಟ್ಟು ಹೊಸ ಪ್ರಕರಣಗಳ ಸಂಖ್ಯೆ 103 ಆಗಿದ್ದು, ಈ ಹಿಂದೆ ಅತಿ ಹೆಚ್ಚು 127 ಕೇಸ್ ಜುಲೈ 30 ರಂದು ವರದಿಯಾಗಿತ್ತು. 2020ರ ಆರಂಭದಲ್ಲಿ ಸೋಂಕು ಸಣ್ಣ ಪ್ರಮಾಣದಲ್ಲಿದ್ದು, ನಂತರ ಇದರ ಹರಡುವಿಕೆ ಹೆಚ್ಚಾದಾಗ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳುತ್ತಿದ್ದಾರೆ. ಜಿಯಾಜುವಾಂಗ್ ಹುಬೇ ಪ್ರದೇಶಗಳಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದಂತೆ ಈ ಪ್ರದೇಶಗಳನ್ನು ಲಾಕ್‍ಡೌನ್ ಮಾಡಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ.
ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಚೀನಾ ಸರ್ಕಾರ ಮತ್ತು ಸ್ಥಳೀಯ ಆಡಳಿತ ಮುನ್ನಚ್ಚರಿಕಾ ಕ್ರಮ ಕೈಗೊಳ್ಳುತ್ತಿವೆ. ಇಲ್ಲಿನ ವಾಂಕುಯಿ ಕೌಂಟಿ ಪ್ರದೇಶದಲ್ಲಿ ಜನರಿಗೆ ಬೇಕಾಗುವ ಸರಕು ಸಾಮಾನುಗಳನ್ನು ತರಲು ವಾರದ ಮೂರು ದಿನ ಮನೆಯ ಒಬ್ಬ ಸದಸ್ಯನಿಗೆ ಅವಕಾಶ ಕೊಡಲಾಗಿದೆ. ಮತ್ತು ಹಲವು ಹೆದ್ದಾರಿಗಳನ್ನು ಮುಚ್ಚಿ ಕ್ರಮಕ್ಕೆ ಮುಂದಾಗಿದೆ.
76 ರೋಗ ಲಕ್ಷಣವಿಲ್ಲದ ಪ್ರಕರಣವನ್ನು ಪತ್ತೆ ಮಾಡಿದೆ. ಒಬ್ಬ ರೋಗಿಯನ್ನು ಪರೀಕ್ಷಿಸಿ ಆತನನ್ನು 27 ದಿನಗಳವರೆಗೆ ತೀವ್ರ ನಿಗಾ ವಹಿಸಲಾಗುತ್ತಿದೆ ನಂತರ ರೋಗದ ಲಕ್ಷಣ ಇಲ್ಲದೆ ಇರುವವರನ್ನು ಚೀನಾ ಬಿಡುಗಡೆ ಮಾಡುತ್ತಿದೆ. ಚೀನಾದಲ್ಲಿ ಒಟ್ಟು 87,536 ಮಂದಿಗೆ ಕೊರೊನಾ ಬಂದಿದ್ದು ಈ ಪೈಕಿ 82,229 ಮಂದಿ ಗುಣಮುಖರಾಗಿದ್ದಾರೆ. 4,634 ಮಂದಿ ಸಾವನ್ನಪ್ಪಿದ್ದು ಸದ್ಯ 673 ಸಕ್ರಿಯ ಪ್ರಕರಣಗಳಿವೆ.