ಏಪ್ರಿಲ್ 7ಕ್ಕೆ ಸಾರಿಗೆ ನೌಕರರ ಮುಷ್ಕರ – ರಾಜ್ಯಾದ್ಯಂತ ಬಸ್ ಬಂದ್

Public TV
2 Min Read

ಬೆಂಗಳೂರು: ಆರನೇ ವೇತನ ಜಾರಿಗೆ ಆಗ್ರಹಿಸಿ ಏಪ್ರಿಲ್ ಏಳರಂದು ಸಾರಿಗೆ ಬಂದ್ ಗೆ ಕರೆ ಕೊಡಲಾಗಿದೆ. ಇಡೀ ರಾಜ್ಯಾದ್ಯಂತ ಬಸ್ ಗಳು ರಸ್ತೆಗಿಳಿಯಲ್ಲ ಎಂದು ಸಾರಿಗೆ ನೌಕರರು ಸರ್ಕಾರಕ್ಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇತ್ತ ನೌಕರರಿಗೆ ಸೆಡ್ಡು ಹೊಡೆಯಲು ಸಚಿವರು ಖಾಸಗಿ ವಾಹನಗಳನ್ನು ಇಳಿಸುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಏಪ್ರಿಲ್ 6 ರೊಳಗೆ 6 ನೇ ವೇತನ ಆಯೋಗ ಜಾರಿ ಆಗಬೇಕು ಇಲ್ಲದಿದ್ರೆ ಏಪ್ರಿಲ್ 7ರಂದು ಮುಷ್ಕರ ನಡೆಸುವುದಾಗಿ ಸರ್ಕಾರಕ್ಕೆ ಸಾರಿಗೆ ನೌಕರರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನೇನು ಪ್ರತಿಭಟನೆಗೆ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ಈ ವಿಚಾರವಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಹತ್ವದ ಸುದ್ದಿಗೋಷ್ಟಿ ನಡೆಸಿದರು. ವೇತನ ಹೆಚ್ಚಳ ಮಾಡಲು ನೀತಿ ಸಂಹಿತೆ ಅಡ್ಡಿಯಿದೆ. ನೀತಿ ಸಂಹಿತೆ ಮುಗಿದ ಬಳಿಕ ವೇತನ ಹೆಚ್ಚಳ ಮಾಡುವ ಖಾತ್ರಿ ಕೊಡುತ್ತೇವೆ. ಚುನಾವಣಾ ಆಯೋಗ ಅದಕ್ಕೂ ಮುನ್ನ ಅನುಮತಿ ನೀಡಿದರೆ ಚರ್ಚಿಸಿ ಘೋಷಣೆ ಮಾಡ್ತೇವೆ. ಖಾಸಗಿ ಬಸ್ ನವರಿಗೆ ಸ್ಪಂದಿಸುವಂತೆ ಆಹ್ವಾನ ಕೊಟ್ಟಿದ್ದೇವೆ. ಮಿನಿ ಬಸ್, ಟೆಂಪೋ ಟ್ರಾವೆಲರ್ ಗಳನ್ನೂ ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಬಂದ್ ಬಗ್ಗೆ ಮಾತನಾಡಿದದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ನಾವು ಸರ್ಕಾರಕ್ಕೆ ಮೂರೂವರೆ ತಿಂಗಳು ಗಡುವು ಕೊಟ್ಟಿದ್ದೇವು. ಅಂದಿನಿಂದ ಇಲ್ಲಿಯವರೆಗೂ ಸರ್ಕಾರಕ್ಕೆ ಕಾಲಾವಕಾಶ ಇತ್ತು. ಈಗ ಸರ್ಕಾರ ನೀತಿ ಸಂಹಿತೆ ನೆಪ ಹೇಳುತ್ತಿದೆ. ನಾಡಿದ್ದು ಬಸ್ ಬಂದ್ ಇದ್ದೇ ಇರುತ್ತೆ. ಕೊರೊನಾ ನಿಯಮಗಳನ್ನು ಮೀರಲ್ಲ. ಅಸಹಕಾರ ಚಳುವಳಿಯಂತೆ ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸುತ್ತೇವೆ. ಕೊರೊನಾ ಕಡಿಮೆ ಇರೋ ಕಡೆ ಮುಷ್ಕರ ನಡೆಸಿ ಉಪವಾಸ ಕೈಗೊಳ್ಳತ್ತೇವೆ ಎಂದು ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆಯುವ ಸಲುವಾಗಿ ಖಾಸಗಿ ವಾಹನಗಳನ್ನ ರಸ್ತೆಗಿಳಿಸಲು ಸರ್ಕಾರ ಸಜ್ಜಾಗಿದೆ. ಹೀಗಾಗಿ ಇಂದು ಟ್ಯಾಕ್ಸಿ, ಮಿನಿ ಕ್ಯಾಬ್ ಮತ್ತು ಬಸ್ ಮಾಲೀಕರೊಂದಿಗೆ ಸಾರಿಗೆ ಸಚಿವರು ಚರ್ಚಿಸಿ ಸಭೆ ನಡೆಸಿದ್ದಾರೆ. ಈ ಹಿಂದೆ ಖಾಸಗಿ ವಾಹನಗಳ ಮಾಲೀಕರು ಸರ್ಕಾರದ ಮುಂದೆ ಇಟ್ಟಿದ್ದ ಆರು ಬೇಡಿಕೆಗಳನ್ನ ಈಡೇರಿಸುವ ಜೊತಗೆ ಒಂದು ತಿಂಗಳ ಟ್ಯಾಕ್ಸ್ ರಿಲ್ಯಾಕ್ಸ್ಲೇಷನ್ ನೀಡುವುದಾಗಿ ಭರವಸೆ ನೀಡಿದ್ದು, ಖಾಸಗಿ ವಾಹನಗಳನ್ನ ರಸ್ತೆಗೆ ಇಳಿಸುವಂತೆ ತಿಳಿಸಲಾಗಿದೆ. ಇದಕ್ಕೆ ಖಾಸಗಿ ವಾಹನಗಳ ಮಾಲೀಕರು ಒಪ್ಪಿಕೊಂಡಿದ್ದು ಮುಷ್ಕರದ ದಿನ ವಾಹನಗಳನ್ನ ರಸ್ತೆಗೆ ಇಳಿಸುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *