ಏನಪ್ಪಾ ಶಿವಮೂರ್ತಿ, ನಾನು ಅರವಿಂದ್ ಲಿಂಬಾವಳಿ ಮಾತಾಡ್ತಾ ಇರೋದು!

Public TV
1 Min Read

ನಪ್ಪಾ ಶಿವಮೂರ್ತಿ ನಾನು ಅರವಿಂದ ಲಿಂಬಾವಳಿ ಮಾತಾಡ್ತಾ ಇದ್ದೀನಿ, ನೀವು ಧೈರ್ಯವಾಗಿರಬೇಕು, ತುಂಬಾ ಹೆದರಿದ್ದೀರಿ ಅನ್ಸುತ್ತೆ ಅದಕ್ಕೆ ನಿಮ್ಮ ಬಿಪಿ ಜಾಸ್ತಿ ಇದೆ. ಆರಾಮಾಗಿರಿ ನಿಮಗೆ ಬೇಕಾದ ಚಿಕಿತ್ಸೆ ನಾವು ಕೊಡ್ತೀವಿ. ನಿನಗೆ ಯಾವ ಆಸ್ಪತ್ರೆಯಲ್ಲಿ ಬೆಡ್ ಬೇಕು,” ಹೀಗೊಂದು ಸಂಭಾಷಣೆ ಮತ್ತು ಸನ್ನಿವೇಶ ನಡೆದಿದ್ದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ. ಟ್ರಯಾ ಜಿಂಗ್ ಕೇಂದ್ರಗಳಿಂದ ನೇರವಾಗಿ ಕೋವಿಡ್ ಆಸ್ಪತ್ರೆಗಳಿಗೆ ಬೆಡ್ ಬುಕ್ ಮಾಡಲು ಸಿದ್ಧಪಡಿಸಿರುವ ಹೊಸ ತಂತ್ರಾಂಶ ಲೋಕಾರ್ಪಣೆ ಮಾಡಿದ ಸಂದರ್ಭ.

ತಂತ್ರಾಂಶ ಲೋಕಾರ್ಪಣೆ ಮಾಡಿದ ನಂತರ ಆನ್‍ಲೈನ್ ಮೂಲಕ ಮಹದೇವಪುರದ ಜಿಂಕ್ ಹೋಟೆಲ್ ನ ಟ್ರಯಾಜಿಂಗ್ ಕೇಂದ್ರವನ್ನು ಸಂಪರ್ಕ ಮಾಡಿದ ವಾರ್ ರೂಮ್ ಅಧಿಕಾರಿಗಳು ಅಲ್ಲಿನ ಡಾಕ್ಟರ್ ಮಹೇಶ್ವರಿ ಅವರನ್ನು ಸಂಪರ್ಕಿಸಿದರು, ಅವರು ತಪಾಸಣೆ ಮಾಡುತ್ತಿದ್ದ ಕೋವಿಡ್ ಸೋಂಕಿತ ಶಿವಮೂರ್ತಿ ಎನ್ನುವ ಚೆನ್ನಸಂದ್ರ ನಿವಾಸಿ ಜೊತೆ ಸಚಿವರು ಮಾತನಾಡಿದರು. ಈ ವೇಳೆ ಮೇಲ್ಕಂಡ ಸಂಭಾಷಣೆ ನಡೆಯಿತು.

ಡಾಕ್ಟರ್ ಮಹೇಶ್ವರಿ ಅವರಿಗೆ ಶಿವಮೂರ್ತಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಸಚಿವರು ಅವರಿಗೆ ಆಸ್ಪತ್ರೆಗೆ ಸೇರಿಸುವ ಅವಶ್ಯಕತೆ ಇದೆಯೇ ಎಂದು ಕೇಳಿದರು. ಶಿವಮೂರ್ತಿಯವರು ಹೃದಯ ಸಂಬಂಧಿ ಕಾಯಿಲೆ ಮತ್ತು ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸುವುದು ಸೂಕ್ತ ಎಂದು ಡಾಕ್ಟರ್ ಮಹೇಶ್ವರಿ ಹೇಳಿದಾಗ, ಸಚಿವರು ಯಾವ ಆಸ್ಪತ್ರೆ ಬೇಕು ಶಿವ ಮೂರ್ತಿಯವರೇ ಎಂದರು.

ಶಿವಮೂರ್ತಿ ಅವರ ಮನೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹತ್ತಿರವಿರುವುದರಿಂದ ತಮಗೆ ಅಲ್ಲಿ ಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಸಚಿವರಿಗೆ ಮನವಿ ಮಾಡಿದರು. ಕೂಡಲೇ ಸಚಿವರು ಅವರಿಗೆ ಬೆಡ್ ಬುಕ್ ಮಾಡುವಂತೆ ಸೂಚಿಸಿದರು. ಕೆಲವೇ ಕ್ಷಣಗಳಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಅವರಿಗೆ ಹಾಸಿಗೆ ಮೀಸಲಿಡಲಾಗಿತ್ತು ಮತ್ತು ಎಸ್‍ಎಂಎಸ್ ಮೂಲಕ ಮಾಹಿತಿ ಕೂಡ ನೀಡಲಾಯಿತು.

ಈ ವ್ಯವಸ್ಥೆ ತುಂಬಾ ಚೆನ್ನಾಗಿದೆ ಸರ್ ಎಂದು ಶಿವಮೂರ್ತಿ ಹಾಗೂ ಅವರನ್ನು ತಪಾಸಣೆ ಮಾಡಿದ ವೈದ್ಯೆ ಡಾಕ್ಟರ್ ಮಹೇಶ್ವರಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *