SSLC ಪರೀಕ್ಷೆಗೂ ಲಾಕ್‍ಡೌನ್ ವಿಚಾರಕ್ಕೂ ಸಂಬಂಧವಿಲ್ಲ: ಸಿಎಂ

Public TV
1 Min Read

– ಬೆಂಗ್ಳೂರಿಗರಿಗೆ ಬಿಎಸ್‍ವೈ ಖಡಕ್ ಎಚ್ಚರಿಕೆ

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೂ ಲಾಕ್‍ಡೌನ್ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಣ ತಪ್ಪಿಲ್ಲ. ಆದರೂ ನಾವು ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರು ಪೂರ್ಣ ಲಾಕ್‍ಡೌನ್ ಮಾಡಿಲ್ಲ, ಕೆಲ ಪ್ರದೇಶಗಳಿಗೆ ಲಾಕ್‍ಡೌನ್ ಮುಂದುವರಿಯುತ್ತದೆ. ಇದರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಯಾವುದೇ ತೊಂದರೆಯಾಗಲ್ಲ ಎಂದು ತಿಳಿಸಿದರು.

ಬೆಂಗಳೂರಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಸೀಲ್‍ಡೌನ್ ಮಾಡಿದ್ದೇವೆ. ಮಧ್ಯಾಹ್ನ 1 ಗಂಟೆಗೆ ಸಚಿವರು, ಅಧಿಕಾರಗಳ ಸಭೆ ನಡೆಯಲಿದ್ದು, ನಾಳೆ ಬೆಂಗಳೂರಿನ ಎಲ್ಲ ಶಾಸಕರು, ಸಚಿವರ ಸಭೆ ನಡೆಸಲಾಗುತ್ತದೆ. ಬೆಂಗಳೂರು ಸೀಲ್‍ಡೌನ್ ನಿರ್ಧಾರ ಜನರ ಕೈಯಲ್ಲಿದೆ. ಬೆಂಗಳೂರು ಪೂರ್ಣ ಸೀಲ್‍ಡೌನ್ ಆಗಬಾರದು ಅಂತಿದ್ರೆ ಜನರು ಪೂರ್ಣ ಸಹಕಾರ ಕೊಡಬೇಕು ಎಂದು ಸಿಎಂ ಖಡಕ್ ಸಂದೇಶ ರವಾನಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಸಿಎಂ, ಬೆಂಗಳೂರಿನ ಸಮಸ್ತ ನಾಗರಿಕ ಬಂಧುಗಳಲ್ಲಿ ಮನವಿ. ತೀವ್ರವಾಗಿ ಹರಡುತ್ತಿರುವ ಕೋವಿಡ್ ಸೋಂಕು ಮುಂದಿನ ಹಂತಗಳಲ್ಲಿ ಹರಡದಂತೆ ತಡೆಯಲು ಹೋಮ್ ಕ್ವಾರಂಟೈನ್ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಯಮಗಳ ಪಾಲನೆಯ ಮೇಲ್ವಿಚಾರಣೆ ನಡೆಸಲು ಸ್ವಯಂ ಸೇವಕರಾಗಿ ನೀವೂ ಸಹ ಕಾರ್ಯ ನಿರ್ವಹಿಸಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಸರ್ಕಾರದ ಹೋರಾಟಕ್ಕೆ ಜತೆಯಾಗಲು ಸ್ವಯಂಪ್ರೇರಿತರಾಗಿ ನೋಂದಾಯಿಸಿಕೊಳ್ಳುವ ಮೂಲಕ ಸೋಂಕು ನಿಯಂತ್ರಿಸುವ ಕೆಲಸದಲ್ಲಿ ಕೈಜೋಡಿಸಬಹುದು. ಬಿಬಿಎಂಪಿಯ ನಾಗರಿಕ ಕ್ವಾರಂಟೈನ್ ಸ್ಕ್ವಾಡ್ ಸದಸ್ಯರಾಗಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೆಳಗಿನ ಲಿಂಕ್‍ನಲ್ಲಿ ದಾಖಲಿಸಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲ ಮಕ್ಕಳಿಗೂ ನನ್ನ ಶುಭ ಹಾರೈಕೆಗಳು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಬಳಸಿ, ಭೌತಿಕ ಅಂತರ ಕಾಪಾಡಿಕೊಳ್ಳಿ. ನಿರಾತಂಕದಿಂದ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ ಎಂದು ಸಿಎಂ ವಿದ್ಯಾರ್ಥಿಗಳಿಗೆ ಹಾರೈಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *