ಎಲ್ಲರೂ ಈಜಿ ದಡ ಸೇರಿದರು, ನಾನು ಸೇರಿಲ್ಲ: ಎಚ್.ವಿಶ್ವನಾಥ್

Public TV
2 Min Read

– ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ

ಬೆಂಗಳೂರು: ಭಾರೀ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿಯ ವಿಧಾನ ಪರಿಷತ್ ಟಿಕೆಟ್ ಹಂಚಿಕೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ನಿರೀಕ್ಷೆಯಂತೆಯೇ ಬಿಜೆಪಿ ಸರ್ಕಾರ ರಚಿಸಲು ಕಾರಣರಾದವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಚ್.ವಿಶ್ವನಾಥ್ ಅವರನ್ನು ಕೈ ಬಿಡಲಾಗಿದೆ.

ಈ ಕುರಿತು ಮಾಜಿ ಸಚಿವ ಎಚ್.ವಿಶ್ವನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ನಾನು ಬಿಜೆಪಿಗೆ ಹೊಸಬ, ನನಗೆ ಬಿಜೆಪಿಯ ಆಳ ಅಗಲ ಗೊತ್ತಿಲ್ಲ. ನನ್ನ ಜೊತೆಗೆ ಬಂದವರು ಎಲ್ಲರೂ ಈಜಿ ದಡ ಸೇರಿದ್ದಾರೆ. ನಾನು ಇನ್ನು ಸೇರಿಲ್ಲ. ನಾನು ಹಿಂದುಳಿದ ವರ್ಗದ ಹಿರಿಯ ನಾಯಕ. ಯಾಕೆ ಟಿಕೆಟ್ ತಪ್ಪಿಸಿದ್ದಾರೆ ಗೊತ್ತಿಲ್ಲ. ಇದರಿಂದ ನಾನು ಹತಾಷನಾಗಿಲ್ಲ. ನಮ್ಮ ನಾಯಕ ಯಡಿಯೂರಪ್ಪ, ತ್ಯಾಗಕ್ಕೆ ಪ್ರತಿಫಲ ಸಿಗುತ್ತೆ. ಈಗಲು ಯಡಿಯೂರಪ್ಪನವರ ಮೇಲೆ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯ ನಾಯಕರು ನಾಲ್ಕು ಜನರ ಹೆಸರನ್ನು ಅಂತಿಮಗೊಳಿಸಿ ದೆಹಲಿಗೆ ಕಳುಹಿಸಿದ್ದರು. ಆದರೆ ಇದೀಗ ನನ್ನ ಹೆಸರನ್ನು ಕೈ ಬಿಡಲಾಗಿದೆ. ಕಡೆ ಘಳಿಗೆವರೆಗೂ ಯಡಿಯೂರಪ್ಪನವರು ನನ್ನ ಪರವಾಗಿ ಪ್ರಯತ್ನ ಮಾಡಿದ್ದಾರೆ. ಆದರೆ ದೆಹಲಿಯಲ್ಲಿ ನನಗೆ ಟಿಕೆಟ್ ತಪ್ಪಿದೆ. ಇದರ ಹಿಂದೆ ಯಾರಿದ್ದಾರೆ ಗೊತ್ತಿಲ್ಲ. ಇಂತಹ ಸಾಕಷ್ಟು ಸಂಕಷ್ಟಗಳನ್ನ ಎದುರಿಸಿಯೇ ನಾನು ಈ ಹಂತಕ್ಕೆ ಬಂದಿದ್ದೇನೆ. ನನಗೆ ಇದು ಹೊಸತೇನು ಅಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಈಗಲೂ ನಂಬಿಕೆ ಇದೆ. ಕಾದು ನೋಡೋಣ ಎಂದು ತಿಳಿಸಿದ್ದಾರೆ.

ಯಾರ ಕೈವಾಡವಿದೆ ಎಂದು ತಿಳಿದಿಲ್ಲ. ವೈಯಕ್ತಿಕವಾಗಿ ನನಗೆ ಬೇಸರವಿಲ್ಲ. ಆದರೆ ನನ್ನಂಥ ಒಬ್ಬ ಹಿರಿಯ ಹಿಂದುಳಿದ ನಾಯಕನಿಗೆ ಯಾಕೆ ಟಿಕೆಟ್ ತಪ್ಪಿತು ಎಂಬ ನೋವಿದೆ. ಈಗಾಗಲೇ ಹಲವು ನೋವುಗಳನ್ನು ನುಂಗಿಕೊಂಡು ಬಂದವನು. ಈಗ ಎಂಎಲ್‍ಸಿ ಟಿಕೆಟ್ ಸಿಗಲಿಲ್ಲವೆಂದು ಹತಾಶನಾಗಿಲ್ಲ.

ನನ್ನ ಧ್ವನಿ ಅಡಗಲಿಕ್ಕೆ ಸಾಧ್ಯವಿಲ್ಲ, ಯಾರಿಂದಲೂ ಅಡಗಿಸಲೂ ಸಾಧ್ಯವಿಲ್ಲ. ವಿಶ್ವನಾಥ್ ಧ್ವನಿ ಯಾವಾಗಲೂ ಮಾರ್ಧನಿಸುತ್ತಿರುತ್ತದೆ. ಮೆತ್ತಗಾಗುವ ಪ್ರಶ್ನೆಯೇ ಇಲ್ಲ. ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.

ತಡರಾತ್ರಿ ಬಿಜೆಪಿ ತನ್ನ ಮೇಲ್ಮನೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇಂದು ನಾಲ್ವರು ನಾಮಪತ್ರ ಸಲ್ಲಿಸಲಿದ್ದಾರೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಬಿಜೆಪಿ ಬಿಗ್ ಶಾಕ್ ನೀಡಿದೆ. ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ನಾಲ್ವರಿಗೆ ಟಿಕೆಟ್ ಸಿಕ್ಕಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್ ಗೆ ನೀಡಿದ ಮಾತನ್ನು ಸಿಎಂ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಆದರೆ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ವಿಫಲವಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *