ಎರಡು ದೇಹಗಳು ಒಂದೇ ಧ್ವನಿ – ವಿಷ್ಣು, ಎಸ್‍ಪಿಬಿ ಬಾಂಧವ್ಯದ ಬಗ್ಗೆ ಅನಿರುದ್ಧ್ ಮಾತು

Public TV
2 Min Read

– ಇಬ್ಬರು ಏಕವಚನದಲ್ಲಿ ಮಾತನಾಡುತ್ತಿದ್ರು
– ಕಪ್ಪು ಬಣ್ಣ ಹಾಕಿ ಕಂಬನಿ

ಬೆಂಗಳೂರು: ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಯಣ್ಯಂ ಇಂದು ಇಹಲೋಕ ತ್ಯಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿರುತೆರೆ ನಟ ಅನಿರುದ್ಧ್ ಅತ್ಯಂತ ಕೆಟ್ಟ ದಿನವಿದು ಎಂದು ಹೇಳುವ ಮೂಲಕ ಕಪ್ಪು ಬಣ್ಣ ಹಾಕಿ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ಕೊನೆಯ ಬಾರಿ ಕೊರೊನಾ ಜಾಗೃತಿ ಗೀತೆಗೆ ದನಿಯಾಗಿದ್ರು ಎಸ್‍ಪಿಬಿ

ನಟ ಅನಿರುದ್ಧ್ ತಮ್ಮ ಫೇಸ್‍ಬುಕ್ ಪ್ರೊಫೈಲ್ ಫೋಟೋವನ್ನು ಡಿಲೀಟ್ ಮಾಡಿ ಕಪ್ಪು ಬಣ್ಣ ಹಾಕುವ ಮೂಲಕ ಎಸ್.ಪಿ.ಬಾಲಸುಬ್ರಹ್ಯಣ್ಯಂ ಅಗಲಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ತಮ್ಮ ಎಸ್‍ಪಿಬಿ ಅವರ ಮಧ್ಯೆ ಇದ್ದ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

ಎಲ್ಲರಿಗೂ ನಮಸ್ಕಾರ ಎಸ್‍ಪಿಬಿ ಸರ್ ಇಂದು ನಮ್ಮನೆಲ್ಲಾ ಶಾರೀರಿಕವಾಗಿ ಬಿಟ್ಟು ಹೋಗಿದ್ದಾರೆ. ಇದರಿಂದ ತುಂಬಾ ಬೇಸರ, ದುಃಖ, ಸಂಕಟ ಆಗುತ್ತಿದೆ. ಬಾಲಸುಬ್ರಹ್ಮಣ್ಯಂ ಮತ್ತು ಡಾ.ವಿಷ್ಣುವರ್ಧನ್ ಅವರ ಸಂಬಂಧ ಯಾವ ರೀತಿ ಇತ್ತು ಎಂದು ನಿಮ್ಮೆಲ್ಲರಿಗೂ ಗೊತ್ತಿದೆ. ಅವರಿಬ್ಬರು ತುಂಬಾ ಒಳ್ಳೆಯ ಸ್ನೇಹಿತರು. ಪರಸ್ಪರ ಏಕವಚನದಲ್ಲಿ ಮಾತನಾಡುತ್ತಿದ್ದರು. ಅವರ ಬಾಂಧವ್ಯ ಎರಡು ದೇಹಗಳು ಒಂದೇ ಧ್ವನಿ ಆಗಿತ್ತು ಎಂದು ಹೇಳಿದರು.

ನನ್ನ ಕೆಲ ಸಿನಿಮಾಗಳಿಗೆ ಅವರು ಧ್ವನಿಯಾಗಿದ್ದುದ್ದು ನನ್ನ ಅದೃಷ್ಟ. ಅಪ್ಪ ಅವರು ಶಾರೀರಿಕವಾಗಿ ಬಿಟ್ಟು ಹೋದ ಮೇಲೂ ಸಹ ಎಸ್‍ಪಿಬಿ ಸರ್ ನಮ್ಮ ಕುಟುಂಬದವರ ಜೊತೆ ತುಂಬಾ ಪ್ರೀತಿಯಿಂದ ಗೌರವದಿಂದ ಇದ್ದರು. 2011ರಲ್ಲಿ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ವಿ. ಆ ಕಾರ್ಯಕ್ರಮದಲ್ಲಿ ಅಪ್ಪ ಅವರನ್ನು ನೆನಪಿಸಿಕೊಂಡು ಅನೇಕ ಹಾಡಗಳನ್ನು ಹಾಡಿದ್ದರು. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಅನಿರುದ್ಧ್ ನೋವಿನಿಂದ ಹೇಳಿದ್ದಾರೆ.

https://www.facebook.com/Anirudhofficialpage/photos/a.107512207315687/400945701305668/

ಎಸ್‍ಪಿಬಿ ಸರ್ ಭೇಟಿ ಮಾಡಿದಾಗಲೆಲ್ಲಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅಂತಹ ಮಹಾನ್ ವ್ಯಕ್ತಿ, ಗಾಯಕರು ಸಿಗುವುದು ತುಂಬಾನೇ ವಿರಳ. ಎಷ್ಟು ಹಾಡು, ಎಷ್ಟು ಭಾಷೆಯಲ್ಲಿ ಹಾಡಿದ್ದಾರೆ. ಅತ್ಯಂತ ಉನ್ನತ ಮಟ್ಟಕ್ಕೆ ತಲುಪಿರುವ ಗಾಯಕರು. ಅಂತಹ ಗಾಯಕರನ್ನು ಮತ್ತೆ ನೋಡುತ್ತೇವೆ ಎಂದು ನಮಗನಿಸುತ್ತಿಲ್ಲ. ಇವತ್ತು ನಾವು ಅವರನ್ನು ಶಾರೀರಿಕವಾಗಿ ಕಳೆದುಕೊಂಡಿದ್ದೇವೆ. ಹೀಗಾಗಿ ನನಗೆ ಮಾತುಗಳೇ ಬರುತ್ತಿಲ್ಲ ಎಂದು ಭಾವುಕರಾದರು.

ಎಸ್.ಪಿ.ಬಾಲಸುಬ್ರಹ್ಯಣ್ಯಂ ಹಾಡುಗಳನ್ನು ಕೇಳುತ್ತಲೇ ಬೆಳೆದಿದ್ದೇನೆ. ಅವರ ಹಾಡುಗಳು ಮೂಲಕ ಯಾವಾಗಲೂ ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ. ಎಸ್‍ಪಿಬಿ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರಿಗೆ ಮೋಕ್ಷ ಸಿಗಲಿ. ತಮ್ಮ ಹಾಡುಗಳ ಮೂಲಕ ಎಸ್‍ಪಿಬಿ ಯಾವಾಗಲೂ ಅಮರರಾಗಿರುತ್ತಾರೆ ಎಂದು ಅನಿರುದ್ಧ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *