ಎಮ್ಮೆ ಚರ್ಮದ ಸರ್ಕಾರವಲ್ಲ, ಘೇಂಡಾಮೃಗದ ಸರ್ಕಾರ: ಸಿದ್ದರಾಮಯ್ಯ

Public TV
2 Min Read

– ಗ್ರಾಮ ಸ್ವರಾಜ್ಯ ಕಾಂಗ್ರೆಸ್ ಕೂಸು

ಹಾವೇರಿ/ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರವಾಸದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆದ್ದಾರೆ. ಬಿಜೆಪಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದು ಎಮ್ಮೆ ಚರ್ಮದ ಸರ್ಕಾರವಲ್ಲ. ಇದೊಂದು ಘೇಂಡಾಮೃಗ ಚರ್ಮದ ಸರ್ಕಾರ ಎಂದು ಕಿಡಿಕಾರಿದ್ದಾರೆ.

ನೀರಾವರಿ ಯೋಜನೆಗಾಗಿ ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳೋದನ್ನ ವಿರೋಧಿಸಿ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣದಲ್ಲಿ ಧಾರವಾಡ ಹೈಕೋರ್ಟ್ ನ ಹಿರಿಯ ವಕೀಲ ಬಿ.ಡಿ.ಹಿರೇಮಠ ನಡೆಸುತ್ತಿರೋ ಉಪವಾಸ ಸತ್ಯಾಗ್ರಹ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ನಡೆಸುತ್ತಿರೋ ಸತ್ಯಾಗ್ರಹಕ್ಕೆ ಮಾಜಿ ಸಿ.ಎಂ.ಸಿದ್ದರಾಮಯ್ಯ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಉಪವಾಸ ಸತ್ಯಾಗ್ರಹವನ್ನ ಬಿಡುವಂತೆ ಮನವಿ ಮಾಡಿಕೊಂಡರು.

ಈ ಸರ್ಕಾರಕ್ಕೆ ಎಲ್ಲ ಇಂದ್ರಿಯಗಳು ಹೋಗಿ ಬಿಟ್ಟಿವೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಬಾರದು. ಈ ಕ್ಷೇತ್ರದವರೆ ಸಚಿವರಿದ್ದಾರೆ. ಸಚಿವರು ಬಂದು ಕೇಳಬಹುದಿತ್ತು. ಈವರೆಗೂ ಇಲ್ಲಿನ ಮಂತ್ರಿ ಬಿ.ಸಿ.ಪಾಟೀಲ ರೈತರನ್ನ ಭೇಟಿ ಆಗಿಲ್ಲ ಎಂದು ಕೃಷಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿ.ಸಿ.ಪಾಟೀಲ ಪೊಲೀಸ್ ಅಧಿಕಾರಿ ಆಗಿದ್ದವ. ಈಗ ಹಸಿರು ಶಾಲು ಹಾಕ್ಕೊಂಡು ತಿರುಗಾಡ್ತಿದ್ದಾನೆ ಗಿರಾಕಿ. ನಾನು ನಿಮ್ಮ ಕ್ಷೇತ್ರದಲ್ಲಿ ಐದು ಯೋಜನೆ ಜಾರಿ ಮಾಡಿದ್ದೇನೆ. ಆಗ ನಾನು ಎಂದಾದ್ರೂ ಹಸಿರು ಶಾಲು ಹಾಕ್ಕೊಂಡು ಬಂದಿದ್ದನಾ? ರೈತರು ಹೆಚ್ಚು ಹೆಚ್ಚು ಭಾಗವಹಿಸಬೇಕು, ಹೋರಾಟ ತೀವ್ರಗೊಳ್ಳಬೇಕು. ನಾನೂ ಈ ಬಗ್ಗೆ ಯಡಿಯೂರಪ್ಪ ಜೊತೆ ಚರ್ಚಿಸ್ತೇನೆ. ರೈತರಿಗೆ ಮೋಸ ಮಾಡುವಂತಹ ಇಂಥಾ ಯೋಜನೆ ಕೈಬಿಡಿ ಎಂದು ಸಿಎಂಗೆ ಒತ್ತಾಯಿಸುತ್ತೆನೆ ಎಂದು ಸತ್ಯಾಗ್ರಹ ಹೋರಾಟಗಾರಿಗೆ ತಿಳಿಸಿದರು.

ಗ್ರಾಮ ಸ್ವರಾಜ್ಯ ಕಾಂಗ್ರೆಸ್ ಕೂಸು: ಗ್ರಾಮ ಸ್ವರಾಜ್ಯ ಅಭಿಯಾನ ಕಾಂಗ್ರೆಸ್ಸಿನ ಕೂಸು. ಮಹಾತ್ಮ ಗಾಂಧಿಯವರು ಜಾರಿಗೆ ತಂದಿರುವ ಗ್ರಾಮ ಸ್ವರಾಜ್ಯವನ್ನು ಈಗ ರಾಜಕೀಯ ಲಾಭಕ್ಕಾಗಿ ನಾವು ಜಾರಿಗೆ ತಂದಿದ್ದೇವೆ ಎಂದು ಬಿಜೆಪಿ ಗ್ರಾಮ ಸ್ವರಾಜ್ಯ ಅಭಿಯಾನವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ ವ್ಯವಸ್ಥೆ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಗ್ರಾಮದ ಆಡಳಿತ ಜನರ ಕೈಯಲ್ಲಿ ಇರಬೇಕೆಂದು ಜಾರಿಗೆ ತಂದಿದ್ದು ಕಾಂಗ್ರೆಸ್ ಆದರೇ ಬಿಜೆಪಿಯವರು ಯಾವತ್ತು ರಾಜಕೀಯ ಮೀಸಲಾತಿ ಪರವಾಗಿದ್ದವರಲ್ಲ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

ರಾಜಕೀಯ ಮೀಸಲಾತಿ ಕಾಂಗ್ರೆಸ್ ನ ಕೊಡುಗೆಯಾಗಿದೆ. ಬಿಜೆಪಿಯವರಿಗೆ ಅಧಿಕಾರ ವಿಕೇಂದ್ರಿಕರಣ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಲ್ಲ. ಗ್ರಾಮಸ್ವರಾಜ್ಯ ಕಾಂಗ್ರೆಸ್ ನ ಕೂಸು, ಅದು ಬಿಜೆಪಿಗೆ ಸಂಬಂಧವಿಲ್ಲ ಎಂದ ಅವರು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುತ್ತದೆ. ಹಣ ಚೆಲ್ಲಿ, ಅಧಿಕಾರ ದುರುಪಯೋಗಪಡಿಸಿಕೊಂಡು ಬಿಜೆಪಿಯವರು ತಿಪ್ಪರಲಾಗ ಹಾಕಿದರು ಬಹುಮತ ಪಡೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ. ಆದರೆ ಕಾಂಗ್ರೆಸ್ ಜಾರಿಗೊಳಿಸಿದ ಬಹುತೇಕ ಯೋಜನೆಯನ್ನು ಬಿಜೆಪಿ ನಿಲ್ಲಿಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ಕಾಂಗ್ರೇಸ್ ಅಭಿವೃದ್ಧಿ ಕಾರ್ಯದ ಬಗ್ಗೆ ಗೊತ್ತಿದೆ ಎಂದರು.

ಗ್ರಾಮ ಪಂಚಾಯತಿಯಲ್ಲಿ ಸೀಟ್ ಹರಾಜು ವಿಷಯದ ಕುರಿತು ಮಾತನಾಡಿದ ಅವರು, ಗ್ರಾಮ ಪಂಚಾಯತಿಯಲ್ಲಿ ಸೀಟ್ ಹರಾಜು ಹಾಕಬಾರದು. ಅದು ಕಾನೂನು ಬಾಹಿರ, ಮಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕು, ಇದಕ್ಕೆ ಬಿಜೆಪಿ ಕಾರಣ ಎಂದು ಆರೋಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *