ಎಮ್ಮೆಗಾಗಿ ಇಬ್ಬರ ನಡುವೆ ಜಗಳ – ಪೊಲೀಸರು ಹುಡುಕಿದ್ರು ಸೂಪರ್ ಐಡಿಯಾ!

Public TV
2 Min Read

ಲಕ್ನೋ: ಕಳೆದು ಹೋಗಿರುವ ಅಮೂಲ್ಯವಾದ ವಸ್ತುಗಳನ್ನು ಪತ್ತೆ ಹಚ್ಚಲು ಪೊಲೀಸರು ತಮ್ಮದೇ ಆದ ಕೆಲವೊಂದು ವಿನೂತನ ಐಡಿಯಾಗಳನ್ನು ಬಳಸುತ್ತಿರುತ್ತಾರೆ. ಅಂತೆಯೇ ಇದೀಗ ಉತ್ತರಪ್ರದೇಶದ ಪೊಲೀಸರು ಎಮ್ಮೆಗಾಗಿ ಇಬ್ಬರ ನದುವೆ ನಡೆಯುತ್ತಿದ್ದ ಜಗಳಕ್ಕೆ ಅಂತ್ಯ ಹಾಡಲು ಸೂಪರ್ ಐಡಿಯಾವೊಂದನ್ನು ಹುಡುಕಿದ್ದಾರೆ.

ಹೌದು. ಉತ್ತರಪ್ರದೇಶದ ಕನ್ನೌಜ್ ಎಂಬಲ್ಲಿ ಇಬ್ಬರು ವ್ಯಕ್ತಿಗಳು ಎಮ್ಮೆಗಾಗಿ ಜಗಳವಾಡುತ್ತಿದ್ದರು. ಅಲ್ಲದೆ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ಹೀಗಾಗಿ ಎಸ್‍ಎಸ್‍ಐ ವಿಜಯಕಾಂತ್ ಮಿಶ್ರಾ ಅವರು ಇಬ್ಬರ ನಡುವಿನ ಜಗಳವನ್ನು ನಿಲ್ಲಿಸಲೇಬೇಕು ಎಂದು ತೀರ್ಮಾನ ಮಾಡಿದ್ದಾರೆ.

ವೀರೇಂದ್ರ ಹಾಗೂ ಧರ್ಮೆಂದ್ರ ಇಬ್ಬರೂ ಬೇರೆ ಬೇರೆ ಗ್ರಾಮದವರಾಗಿದ್ದು, ಪೊಲೀಸ್ ಠಾಣೆಗೆ ಬಂದಿದ್ದಾರೆ. ವೀರೇಂದ್ರ ಆಲಿ ನಗರ್ ನಿವಾಸಿಯಾಗಿದ್ದರೆ, ಧರ್ಮೇಂದ್ರ ಮಾಧವ್ ನಗರ್ ನಿವಾಸಿ. ಇಲ್ಲಿ ಧರ್ಮೇಂದ್ರ ತನ್ನ ಎಮ್ಮೆಯನ್ನು ಕದ್ದು ಮುಸ್ಲಿಂ ಎಂಬ ವ್ಯಕ್ತಿಗೆ ಮಾರಿದ್ದಾನೆ ಎಂದು ವೀರೇಂದ್ರ ಆರೋಪಿಸಿದ್ದಾನೆ.

ಮುಸ್ಲಿಂ ವ್ಯಕ್ತಿ ಎಮ್ಮೆಯನ್ನು ಮಾರಾಟ ಮಾಡಲೆಂದು ಭಾನುವಾರ ಜಾನುವಾರು ಮೇಳಕ್ಕೆ ಕರೆದೊಯ್ದಿದ್ದನು. ಈ ವೇಳೆ ಅಲ್ಲಿಗೆ ಬಂದ ವೀರೇಂದ್ರ, ಈ ಎಮ್ಮೆ ತನಗೆ ಸೇರಿದ್ದು ಎಂದು ಕ್ಯಾತೆ ತೆಗೆದಿದ್ದಾನೆ. ಪರಿಣಾಮ ಇಬ್ಬರ ಮಧ್ಯೆ ಜಗಳವೇ ನಡೆದು ಹೋಯಿತು. ಆಗ ಮುಸ್ಲಿಂ ವ್ಯಕ್ತಿ ತಮಗೆ ಧರ್ಮೇಂದ್ರ ಎಂಬಾತ ಈ ಎಮ್ಮೆಯನ್ನ ಮಾರಾಟ ಮಾಡಿದ್ದಾನೆ ಎಂದು ಬಹಿರಂಗಪಡಿಸಿದ್ದಾನೆ.

ಇತ್ತ ಇದೇ ವಿಚಾರವನ್ನಿಟ್ಟುಕೊಂಡು ವೀರೇಂದ್ರ ಭಾನುವಾರವೇ ತಿರ್ವಾ ಕೊಟ್ವಾಲಿ ಪೊಲೀಸ್ ಠಾಣೆಗೆ ತೆರಳಿ ಧರ್ಮೇಂದ್ರ ವಿರುದ್ಧ ದೂರು ದಾಖಲಿಸಿದ್ದಾನೆ. ದೂರಿನಲ್ಲಿ ಗೋಕಳ್ಳತನ ಮಾಡಿರುವ ಆರೋಪ ಮಾಡಿದ್ದಾನೆ. ಆದರೆ ಧರ್ಮೇಂದ್ರ ಈ ವಿಚಾರದಲ್ಲಿ ನಾನು ನಿರಪರಾಧಿಯಾಗಿದ್ದು, ಈ ಎಮ್ಮೆ ನನಗೆ ಸೇರಿದ್ದಾಗಿದೆ ಎಂದು ಪೊಲೀಸರ ಮುಂದೆ ಹೇಳಿದ್ದಾನೆ. ಅಲ್ಲದೆ ಎಮ್ಮೆಯನ್ನು ಮುಸ್ಲಿಂ ವ್ಯಕ್ತಿಗೆ 19,000 ಸಾವಿರಕ್ಕೆ ಮಾರಿರುವುದಾಗಿಯೂ ಹೇಳಿದ್ದಾನೆ.

ಇಬ್ಬರ ಮಾತುಗಳನ್ನು ಕೇಳಿದ ಪೊಲೀಸರೇ ಕನ್‍ಫ್ಯೂಸ್ ಆದರು. ಹೀಗಾಗಿ ಎಮ್ಮೆಯನ್ನೇ ಪೊಲೀಸ್ ಠಾಣೆಗೆ ಕರೆತರುವಂತೆ ಸೂಚಿಸಿದರು. ಅಂತೆಯೇ ಎಮ್ಮೆಯನ್ನು ಠಾಣೆಗೆ ಕರೆತರಲಾಯಿತು. ಈ ವೇಳೆ ಪೊಲೀಸರು ತಮ್ಮ ಐಡಿಯಾವನ್ನು ಬಿಚ್ಚಿಟ್ಟು, ಇಬ್ಬರಲ್ಲೂ ಎಮ್ಮೆಯನ್ನು ಕೂಗುವಂತೆ ಹೇಳಿದರು. ಇಬ್ಬರೂ ಎಮ್ಮೆಯನ್ನು ಕರೆದಾಗ ಎಮ್ಮೆ ಧರ್ಮೇಂದ್ರನ ಬಳಿ ಹೋಯಿತು. ವೀರೇಂದ್ರನತ್ತ ಗಮನಹರಿಸಿಲ್ಲ. ಹೀಗಾಗಿ ಎಮ್ಮೆ ಧರ್ಮೇಂದ್ರನಿಗೆ ಸೇರಿದ್ದಾಗಿದೆ ಎಂದು ಪೊಲೀಸರು ತಿಳಿಸಿದರು. ಈ ಮೂಲಕ ಇಬ್ಬರ ನಡುವಿನ ಜಗಳ ಸುಖಾಂತ್ಯ ಕಂಡಿತು.

Share This Article
Leave a Comment

Leave a Reply

Your email address will not be published. Required fields are marked *