ಎನ್.ಆರ್.ರಮೇಶ್‍ ಕನಸಲ್ಲೂ ನಾನೇ ಬರತ್ತೀನಿ ಅನ್ನಿಸುತ್ತೆ: ಜಮೀರ್ ಅಹ್ಮದ್ ತಿರುಗೇಟು

Public TV
2 Min Read

– ಬಿಜೆಪಿಯೇ ಲೆಕ್ಕದಲ್ಲಿ ರೋಲ್‍ಕಾಲ್ ಎನ್.ಆರ್.ರಮೇಶ್ ಇಲ್ಲ
– ರೇಖಾ ಕದಿರೇಶ್ ನನ್ನ ತಂಗಿಯಂತಿದ್ರು

ಬೆಂಗಳೂರು: ಬಿಜೆಪಿ ನಾಯಕ ಎನ್.ಆರ್.ರಮೇಶ್ ಗೂ ಕನಸಲ್ಲೂ ನಾನೇ ಬರುತ್ತಿದ್ದೀನಿ ಅನ್ನಿಸುತ್ತೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. ಮಾಜಿ ಕಾರ್ಪೋರೇಟ್ ರೇಖಾ ಕದಿರೇಶ್ ಕೊಲೆಗೆ ಜಮೀರ್ ಅಹ್ಮದ್ ಖಾನ್ ಬೆಂಬಲ ಇದೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದರು.

ರೇಖಾ ಕದಿರೇಶ್ ಕೊಲೆಯ ವಿಷಯ ಕೇಳಿ ಶಾಕ್ ಆಯ್ತು. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳು ರೇಖಾ ಅವರ ವಾರ್ಡ್ ನಲ್ಲಿದ್ರೆ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿತ್ತು. 2018 ರಲ್ಲಿ ಗಂಡನನ್ನು ಕಳೆದುಕೊಂಡಿದ್ರು, ಇದೀಗ ಅವರ ಕೊಲೆಯಾಗಿದೆ. ನನ್ನ ತಂಗಿಯಂತಿದ್ದ ರೇಖಾ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ರಾಜ್ಯದಲ್ಲಿ ಜನಪ್ರತಿನಿಧಿಗಳಿಗೆ ರಕ್ಷಣ ಇಲ್ಲದಂತಾಗಿದ್ದು, ಪೊಲೀಸರು ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಶಾಸಕ ಜಮೀರ್ ಅಹ್ಮದ್ ಆಗ್ರಹಿಸಿದರು. ಇದನ್ನೂ ಓದಿ: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ

ರೇಖಾ ಕದಿರೇಶ್ ಬಿಜೆಪಿ ಪಕ್ಷದವರು. ಆದ್ರೆ ಅವರ ಪಕ್ಷದವರೂ ಇಂದು ಯಾರೂ ಬಂದಿಲ್ಲ. ಎಲ್ಲಿಯೋ ಕುಳಿತು ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನದು ಚುನಾವಣೆ ವೇಳೆ ಮಾತ್ರ ರಾಜಕೀಯ. ನಂತರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಕೆಲಸ ಮಾಡಿದ್ದೇನೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಎನ್.ಆರ್.ರಮೇಶ್ ಬಿಜೆಪಿ ಲೆಕ್ಕದಲ್ಲಿಲ್ಲ: ಬಿಜೆಪಿ ಮತ್ತು ಎನ್.ಆರ್.ರಮೇಶ್ ಗೂ ಕನಸಿನಲ್ಲಿಯೂ ನಾನೇ ಬರುತ್ತಿರಬೇಕು. ಏನೇ ಆದ್ರೂ ನನ್ನ ವಿರುದ್ಧವೇ ಆರೋಪ ಮಾಡ್ತಾರೆ. ಕದಿರೇಶ್ ಕೊಲೆ ನಡೆದಾಗಲೂ ಇದೇ ರೀತಿಯ ಆರೋಪಗಳನ್ನ ಮಾಡಿದ್ದರು. ಸಿದ್ದರಾಮಯ್ಯನವರ ಸರ್ಕಾರದಲ್ಲಿ ತನಿಖೆ ಸರಿಯಾಗಿ ನಡೆದಿಲ್ಲ ಅಂದ್ರೆ, ಈಗ ನಿಮ್ಮದೇ ಸರ್ಕಾರ ಇದೆ, ಮತ್ತೊಮ್ಮೆ ತನಿಖೆ ನಡೆಸಿ ಎಂದು ವಾಗ್ದಾಳಿ ನಡೆಸಿದರು.

ಎನ್.ಆರ್.ರಮೇಶ್ ಅವರನ್ನು ಬಿಜೆಪಿ ಲೆಕ್ಕದಲ್ಲಿಯೇ ಇಟ್ಟುಕೊಂಡಿಲ್ಲ. ರಮೇಶ್ ಎಲ್ಲಿ ಏನು ಮಾಡುತ್ತಿದ್ದಾರೆ ಅನ್ನೋ ವಿಷಯ ಎಲ್ಲ ಗೊತ್ತು. ರೇಖಾ ನಿಮ್ಮದೇ ಪಕ್ಷದವರಾಗಿದ್ರೂ, ಇಲ್ಲಿಗೆ ಏಕೆ ಬಂದಿಲ್ಲ ಎಂದು ಪ್ರಶ್ನೆ ಮಾಡಿದ ಜಮೀರ್ ಅಹ್ಮದ್, ನಿಮ್ಮ ರೋಲ್‍ಕಾಲ್ ವಿಷಯ ತಿಳಿದಿದೆ ಎಂದು ಆರೋಪಿಸಿದರು.

ಎನ್.ಆರ್.ರಮೇಶ್ ಹೇಳಿದ್ದೇನು?:
ರೇಖಾ ಕದಿರೇಶ್ ಕೊಲೆಗೆ ಚಾಮರಾಜಪೇಟೆ ಶಾಸಕ ಜಮೀರ್ ಆಹ್ಮದ್ ಖಾನ್ ಬೆಂಬಲ ಇದೆ. ಎರಡು ವರ್ಷದ ಹಿಂದೆ ಪತಿ ಕಳೆದುಕೊಂಡಿದ್ದರು. ಆದಾದನಂತರ ಸಹ ರೇಖಾ ಸಾರ್ವಜನಿಕವಾಗಿ ಬಹಳ ಕೆಲಸ ಮಾಡುತ್ತಿದ್ದರು. ನಿನ್ನೆ ಸಹ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಲಸಿಕೆ ಹಾಕಿಸೋ ಕೆಲಸ ಮಾಡಿದ್ದರು. ಚಾಮರಾಜಪೇಟೆಯಲ್ಲಿ ಶಾಸಕ ಜಮೀರ್ ಯಾವ ರೀತಿಯ ಆಡಳಿತ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಇನ್ನೂ ಐದಾರು ತಿಂಗಳಿನಲ್ಲಿ ಪಾಲಿಕೆ ಚುನಾವಣೆ ಬರಲಿದೆ. ಮತ್ತೆ ಚುನಾವಣೆಯಲ್ಲಿ ಅವರೆ ಗೆಲ್ತಾರೆ ಅನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ರು.

ಜಮೀರ್ ಅವರು ಇದಕ್ಕೆ ಬೆಂಬಲ ಮಾಡಿರೋದು ಸತ್ಯ. ಕದಿರೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರೋ ವ್ಯಕ್ತಿಯ ತನಿಖೆ ಸರಿಯಾಗಿ ನಡೆದಿದ್ರೆ ಮತ್ತೊಂದು ಜೀವ ಹೋಗುತ್ತಿರಲಿಲ್ಲ. ಅವತ್ತು ಸಿದ್ದರಾಮಯ್ಯನವರ ಸರ್ಕಾರ ಇತ್ತು. ಅತೂಶ್ ಅನ್ನುವ ವ್ಯಕ್ತಿಯ ಬಗ್ಗೆ ತನಿಖೆಯಾಗಬೇಕಿತ್ತು. ಜಮೀರ್ ಬೆಂಬಲದಿಂದ ತನಿಖೆಯಿಂದ ಅತೂಶ್ ತಪ್ಪಿಸಿಕೊಂಡಿದ್ದನು. ಈ ಕೊಲೆಗೂ ಆತನೇ ಕಾರಣ, ಅತೂಶ್ ನನ್ನು ವಿಚಾರಣೆಗೆ ಒಳಪಡಿಸಿದ್ರೆ ಎಲ್ಲ ಸತ್ಯ ಹೊರಬರಲಿದೆ ಎಂದು ಎನ್.ಆರ್.ರಮೇಶ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *