ಎನ್‍ಸಿಬಿ ಸಹಕಾರ ಕೇಳಿದ್ರೆ ನಾವು ಪೂರ್ಣ ಪ್ರಮಾಣದಲ್ಲಿ ಸಹಕರಿಸ್ತೇವೆ: ಕಮಲ್ ಪಂತ್

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಎನ್‍ಸಿಬಿ (Narcotics Control Bureau) ತನಿಖೆ ನಡೆಸುತ್ತಿದೆ. ಅವರು ನಮ್ಮ ಸಹಕಾರ ಕೇಳಿದರೆ ನಾವು ಸಹಾಯ ಮಾಡುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಇದನ್ನೂ ಓದಿ: ಈ ಹಿಂದೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಆಗಿಲ್ಲ ಏಕೆ?: ಇಂದ್ರಜಿತ್

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಎನ್‍ಸಿಬಿ ತನಿಖೆ ನಡೆಸುತ್ತಿದೆ. ಎನ್‍ಸಿಬಿ ಅಧಿಕಾರಿಗಳು ಹೊರಗಡೆಯಿಂದ ಬರುತ್ತಿದ್ದಾರೆ ಎಂದು ನಮಗೆ ಗೊತ್ತಾಗಿದೆ. ಒಂದು ವೇಳೆ ಎನ್‍ಸಿಬಿ ತಂಡ ನಮ್ಮ ಸಹಕಾರ, ಬೆಂಬಲವನ್ನು ಕೇಳಿದರೆ ನಾವು ಪೂರ್ಣ ಪ್ರಮಾಣದಲ್ಲಿ ಅವರಿಗೆ ಸಹಕಾರ ಕೊಡುತ್ತೇವೆ ಎಂದರು.

ಹೊರಗಡೆಯಿಂದ ಬರುತ್ತಿರುವ ಅಧಿಕಾರಿಗಳು ನಮ್ಮ ಬಳಿ ಬರುವ ನಿರೀಕ್ಷೆ ಇದೆ. ಅವರಿಗೆ ಅನುಕೂಲವಾದಾಗ ಪ್ರಕರಣವನ್ನು ನಮಗೆ ನೀಡಿದರೆ ನಾವು ಖಂಡಿತ ತನಿಖೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಸಹಕಾರ ನೀಡಲು ಪೊಲೀಸರು ಬದ್ಧರಾಗಿದ್ದೇವೆ. ಎನ್‍ಸಿಬಿ ಅಧಿಕಾರಿಯಿಂದ ನಮಗೆ ಇಲ್ಲಿವರೆಗೂ ಯಾವುದೇ ಮಾಹಿತಿ ತಿಳಿಸಿಲ್ಲ. ಎನ್‍ಸಿಬಿ ಮಾಹಿತಿ ಶೇರ್ ಮಾಡುತ್ತಾರೆ. ನಂತರ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಇಂದ್ರಜಿತ್ ಲಂಕೇಶ್ ಹೇಳಿಕೆ ಬಗ್ಗೆ ನಮ್ಮ ಪೊಲೀಸರು ಗಮನಿಸಿದ್ದಾರೆ. ಸುಮೋಟೋ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ರಕ್ಷಣೆ ಬೇಕು ಅಂದರೆ ಕೊಡೋಣ. ಬಳಿಕ ಸಮನ್ಸ್ ಕೊಡುವುದರ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.

ಇಂದ್ರಜಿತ್ ಹೇಳಿದ್ದೇನು?
ಹಲವಾರು ರೇವ್ ಪಾರ್ಟಿಗಳು ನಡೆಯುತ್ತಾ ಇರುತ್ತವೆ. ಯುವ ನಟ ಹಾಗೂ ನಟರು ಇದರಲ್ಲಿ ಸಿಲುಕಿದ್ದಾರೆ. ನನಗೆ ಪರಿಚಯ ಇರುವಂತಹ ಹಾಗೂ ಈಗಾಗಲೇ ಖ್ಯಾತಿಯಲ್ಲಿರುವವವರು ಯಾರೂ ಮಾಡಲ್ಲ ಅಂತ ನಾನು ಖಂಡಿತವಾಗಿ ಹೇಳಬಹುದು. ಆದರೆ ಸಡನ್ ಆಗಿ ಪ್ರಚಾರ ಪಡೆಯುತ್ತಿರುವಂತಹ ಯುವ ನಟ-ನಟಿಯರು ಪಾರ್ಟಿ ಹಾಗೂ ಈ ರೀತಿಗಳಲ್ಲಿ ತಮ್ಮನ್ನು ತಾವು ತೊಡಿಸಿಕೊಳ್ಳುತ್ತಾರೆ ಅಂತ ನಾನು ಕೇಳಿದ್ದೀನಿ. ಹಲವಾರು ಘಟನೆಗಳು ಕೂಡ ನನಗೆ ತಿಳಿದಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದಂತೆ ನನಗೂ ರಕ್ಷಣೆ ಕೊಟ್ಟರೆ ನಾನೂ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *